ವಿಶೇಷ ಮತದಾರರ ಪರಿಷ್ಕರಣೆಗೆ ವಿದ್ಯಾರ್ಥಿಗಳಿಂದ ಜಾಗೃತಿ ಅಭಿಯಾನ

ವಿಶೇಷ ಮತದಾರರ ಪರಿಷ್ಕರಣೆಗೆ ವಿದ್ಯಾರ್ಥಿಗಳಿಂದ ಜಾಗೃತಿ ಅಭಿಯಾನ Awareness campaign by students for special electoral roll revision

ಬೆಳಗಾವಿ 14: ಓದು ವ್ಯಕ್ತಿಯನ್ನು ರೂಪಿಸಿದರೆ, ಮತದಾನ ಸದೃಢ ದೇಶವನ್ನು ರೂಪಿಸುತ್ತದೆ. ಮತದಾನ ಪ್ರತಿಯೊಬ್ಬ ನಾಗರಿಕರ ಪರಮ ಕರ್ತವ್ಯ. ಹದಿನೆಂಟು ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಅರ್ಹ ನಾಗರಿಕರೂ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರಜಾಪ್ರಭುತ್ವವನ್ನು ಬಲಪಡಿಸಲು ಪ್ರತಿಯೊಬ್ಬರೂ ಮತದಾರರಾಗುವುದು ಅತ್ಯಂತ ಮುಖ್ಯ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಸ್‌. ಸಿ. ಪಾಟೀಲ್ ಅವರು ಕರೆ ನೀಡಿದರು. 

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಹಾಗೂ ಮತದಾರರ ಸಾಕ್ಷರತಾ ಕ್ಲಬ್ ನೇತೃತ್ವದಲ್ಲಿ ಮಂಗಳವಾರದಂದು ವಿಶೇಷ ಮತದಾರರ ಪರೀಕ್ಷರಣೆ 2026 ಕುರಿತು ನಗರದಲ್ಲಿ ಆಯೋಜಿಸಲಾಗಿದ್ದ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಕರ್ನಾಟಕದಲ್ಲಿ ವಿಶೇಷ ಮತದಾರರ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಅದರ ಕುರಿತು ನಮ್ಮ ವಿದ್ಯಾರ್ಥಿಗಳು ಜಾಥಾ ನಡೆಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಅತ್ಯುತ್ತಮ ಕಾರ್ಯ. ಮತದಾರರು ಅದಕ್ಕೆ ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ತಮ್ಮ ಮತದಾರರ ಚೀಟಿಯನ್ನು ಪರಿಷ್ಕರಿಸಿಕೊಳ್ಳುವಂತೆ ಹೇಳಿದರು. 

ಜಾಥಾದಲ್ಲಿ ವಿದ್ಯಾರ್ಥಿಗಳು ಮತದಾನದ ಮಹತ್ವ, ಮತದಾರರ ಪಟ್ಟಿಯಲ್ಲಿ ಹೆಸರು ಸೇರೆ​‍್ಡ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಸೇರಿದಂತೆ ವಿಶೇಷ ಮತದಾರರ ಪರಿಷ್ಕರಣೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿ, ಹದಿನೆಂಟು ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು. 

 ಮತಚಲಾವಣೆ ನಮ್ಮ ಹಕ್ಕು ಜವಾಬ್ದಾರಿ, ಅರ್ಹರೆಲ್ಲರೂ ಮತದಾರರಾಗಿ ನೋಂದಾಯಿಸಿಕೊಳ್ಳಿ ಎಂಬ ಘೋಷಣೆಗಳ ಮೂಲಕ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಿಂದ ಜಾಥಾ ಆರಂಭಿಸಿ, ಮಾಳಮಾರುತಿ ಬಡಾವಣೆ, ಅಶೋಕ ನಗರ, ರಾಮತೀರ್ಥ ನಗರ, ಆಂಜನೇಯ ನಗರದ ಮೂಲಕ ಸಾಗಿ ಜಾಗೃತಿ ಮೂಡಿಸಿ, ಮರಳಿ ಕಾಲೇಜಿಗೆ ಬಂದು ಸಮಾಪ್ತಿಗೊಳಿಸಿದರು. 

ವಿದ್ಯಾರ್ಥಿಗಳ ಜಾಥಾದಲ್ಲಿ ವಿಶ್ವವಿದ್ಯಾಲಯದ ಮತದಾರರ ಸಾಕ್ಷರತಾ ಕ್ಲಬ್ ಸಂಯೋಜಕ ಡಾ. ಮಲ್ಲೇಶ್ ದೊಡ್ಡಲಕ್ಕಣ್ಣವರ, ಕಾಲೇಜಿನ ಮತದಾರರ ಸಾಕ್ಷರತಾ ಕ್ಲಬ್ ಸಂಯೋಜಕ ಪ್ರಕಾಶ ಎಸ್‌. ಕಮತಿ, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.