ಸ್ಟುಡಿಯೋ ಟೂರ್ ಕಾರ್ಯಗಾರದಲ್ಲಿ ಮಾಧ್ಯಮ ಕ್ಷೇತ್ರದ ಅವಕಾಶಗಳ ಕುರಿತು ಜಾಗೃತಿ

ಸ್ಟುಡಿಯೋ ಟೂರ್ ಕಾರ್ಯಗಾರದಲ್ಲಿ ಮಾಧ್ಯಮ ಕ್ಷೇತ್ರದ ಅವಕಾಶಗಳ ಕುರಿತು ಜಾಗೃತಿ Awareness about opportunities in the media sector at the studio tour workshop

ಲೋಕದರ್ಶನ ವರದಿ 

ವಿಜಯಪುರ 17 :  ಮಾಧ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು, ಅವುಗಳನ್ನು ಸಮರ​‍್ಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ವೃತ್ತಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ “ಸ್ಟುಡಿಯೋ ಟೂರ್‌” ಮತ್ತು ಟಿವಿ ಆಂಕರಿಂಗ್ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಪತ್ರಿಕೋದ್ಯಮವು ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಅಗತ್ಯವಾದ ವಿವಿಧ ಕೌಶಲ್ಯಗಳನ್ನು ನೀಡುತ್ತದೆ. ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದರಿಂದ ವ್ಯಕ್ತಿಗತ ಬೆಳವಣಿಗೆಯ ಜೊತೆಗೆ ಸಮಾಜದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೋರ್ಸ್ಗಳನ್ನು ಆಯ್ಕೆ ಮಾಡುವಾಗ ಬೇರೆಯವರ ಮೇಲೆ ಅವಲಂಬಿತರಾಗದೇ, ತಮ್ಮ ಸಾಮರ್ಥ್ಯ ಮತ್ತು ಸ್ಪಷ್ಟ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂದೀಪ್ ಮಾತನಾಡಿ, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಸುದ್ದಿಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಅಗತ್ಯವೆಂದು ಹೇಳಿದರು.  

ಟಿವಿ ಸ್ಟುಡಿಯೋದಲ್ಲಿ ನಡೆಯುವ ಕಾರ್ಯವೈಖರಿ ಹಾಗೂ ಸುದ್ದಿ ಸಂಗ್ರಹಣೆಯಿಂದ ಹಿಡಿದು ಪ್ರಸಾರವಾಗುವ ಹಂತಗಳ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ಕೋಲಾರ, ಕೊಪ್ಪಳ ಹಾಗೂ ಕನಕಗಿರಿ ಸ್ನಾತಕ ವಿದ್ಯಾರ್ಥಿನಿಯರು, ಅತಿಥಿ ಉಪನ್ಯಾಸಕಿ ಹುಲಿಗೆಮ್ಮ, ವಿಭಾಗದ ಅತಿಥಿ ಉಪನ್ಯಾಸಕಿ ಸುಷ್ಮಾ ಪವಾರ, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂದೀಪ್ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.