ಪ್ರಶಸ್ತಿಗಳು ಕರ್ತವ್ಯ, ಜವಾಬ್ದಾರಿಯನ್ನು ಹೆಚ್ಚಿಸುತ್ತವೆ: ತಹಶೀಲ್ದಾರ ನಿಂಗಣ್ಣ ಬಿರಾದಾರ

ಪ್ರಶಸ್ತಿಗಳು ಕರ್ತವ್ಯ, ಜವಾಬ್ದಾರಿಯನ್ನು ಹೆಚ್ಚಿಸುತ್ತವೆ: ತಹಶೀಲ್ದಾರ ನಿಂಗಣ್ಣ ಬಿರಾದಾರ  Awards increase duty and responsibility: Tahsildar Ninganna Biradar

ದೇವರ ಹಿಪ್ಪರಗಿ 09: ಶಾಲೆ ಮತ್ತು ಅಂಗನವಾಡಿಗಳು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಮೂಲ ಕೇಂದ್ರಗಳಾಗಿವೆ. ಪಡೆದುಕೊಂಡ ಪ್ರಶಸ್ತಿಗಳು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದು ತಹಶೀಲ್ದಾರ ನಿಂಗಣ್ಣ ಬಿರಾದಾರ ಹೇಳಿದರು.  

ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ನೇಹ ಸಂಸ್ಥೆ, ಐ ಎಲ್ ಪಿ- ಕಲಿಕಾ ಚೇತನ ಯೋಜನೆ ದೇವರ ಹಿಪ್ಪರಗಿ ಗುರುವಾರ ಹಮ್ಮಿಕೊಂಡ ಉತ್ತಮ ಶಾಲಾ ಶಿಕ್ಷಕ ಮತ್ತು ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯ ಮಟ್ಟದಲ್ಲಿ ಇಂತವರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ತುಂಬಾ ಒಳ್ಳೆಯ ಕೆಲಸವಾಗಿದೆ ಎಂದರು.  

 ಪಟ್ಟಣ ಪಂಚಾಯತ ಉಪಾಧ್ಯಕ್ಷ ರಮೇಶ ಮಸಬಿನಾಳ ಮಾತನಾಡಿ, ಸದೃಢ ಮತ್ತು ಸಮರ್ಥ ಸಮಾಜದ ನಿರ್ಮಾಣಕ್ಕೆ ಶಿಕ್ಷಣವೇ ಭದ್ರಬುನಾದಿ. ಇಂತಹ ಶಿಕ್ಷಣವು ಗುಣಮಟ್ಟ ವಾಗಬೇಕಾದರೆ  ಶಿಕ್ಷಕ ಪಾಲಕ ಬಾಲಕ ಈ ಮೂವರು ಕೊಂಡಿಯಾಗಿ ಇರಬೇಕು ಎಂದು ಹೇಳಿದರು. ಶಿಕ್ಷಕರ, ಅಂಗನವಾಡಿ  ಹಾಗೂ ಆಶಾ ಕಾರ್ಯಕರ್ತೆಯರ ಕೆಲಸಗಳನ್ನು ಶ್ಲಾಘಿಸಿದರು.  

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್‌. ವಾಲೀಕಾರ ಮಾತನಾಡಿ, ದೇಶದ ಭವಿಷ್ಯ ಅಡಗಿರುವುದು ವರ್ಗದ ಕೋಣೆಯಲ್ಲಿ ಎಂದರು. ಸಮುದಾಯದಲ್ಲಿ ಎಲೆಮರೆ ಕಾಯಿಯಂತೆ ನಿಸ್ವಾರ್ಥದಿಂದ ಸೇವೆಯನ್ನು ಸಲ್ಲಿಸುತ್ತಿರುವ ಶಿಕ್ಷಕರು ಮತ್ತು ಅಂಗನವಾಡಿ ಗುರುಮಾತೆಯರನ್ನು ಗುರುತಿಸಿ  ಅವರಿಗೆ ಗೌರವವನ್ನು ನೀಡಿದ್ದು ಶ್ಲಾಘನೀಯ. ನಾವು ಮಾಡುವ ಕೆಲಸ ನಮಗೆ ತೃಪ್ತಿ ನೀಡುವಂತೆ  ಇರಬೇಕು ಎಂದರು.   

ಸಿ.ಆರಿ​‍್ಪ ವಿಜಯಲಕ್ಷ್ಮೀ ನವಲಿ ಮಾತನಾಡಿದರು.  ಪ್ರಶಸ್ತಿ ಪುರಸ್ಕೃತ ಮುಖ್ಯ ಗುರುಗಳಾದ ಎಸ್ ಎಸ್ ಸಾತಿಹಾಳ ಹಾಗೂ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮೀ ಹಿಪ್ಪರಗಿ ಅಭಿಪ್ರಾಯ ಹಂಚಿಕೊಂಡರು.   

ವೇದಿಕೆಯ ಮೇಲೆ ಐ ಎಲ್ ಪಿ ರಾಷ್ಟ್ರೀಯ ಸಮನ್ವಯ ಅಧಿಕಾರಿ ವಿಕ್ಟರ ಟಾರೋ, ಸ್ನೇಹ ಸಂಸ್ಥೆ ನಿರ್ದೇಶಕ ಟಿ. ರಾಮಾಂಜನೇಯ, ಪಟ್ಟಣ ಪಂಚಾಯತ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಆರೋಗ್ಯ ಇಲಾಖೆಯ ಸುಕನ್ಯಾ ಚಳಗೇರಿ, ಪಟ್ಟಣ ಪಂಚಾಯತಿಯ ಸೋಮಶೇಖರ ಭೋವಿ,  ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪಿ ಸಿ ತಳಕೇರಿ, ಬಸವರಾಜ ದೇವಣಗಾಂವ, ಸಂಯೋಜಕ ಸಾಗರ ಘಾಟಗೆ, ಬಾಗಣ್ಣ ಹಾಳಕಿ, ಮಲ್ಲಮ್ಮ ಹೊನ್ನಳ್ಳಿ, ಭೀಮಾಬಾಯಿ ಹೇರೂರ, ಶಾಲಾ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.   

ಸಂಪನ್ಮೂಲ ವ್ಯಕ್ತಿ ರಾವುತ ಮರಬಿ ನಿರೂಪಿಸಿದರು. ಶ್ರೀಶೈಲ ಜೋಗರ ಸ್ವಾಗತಿಸಿದರು. ಗೌಡಪ್ಪ ಬಿರಾದಾರ ವಂದಿಸಿದರು.