ಸರ್ಕಾರಿ ಸುರಕ್ಷಾ ಯೋಜನೆಗಳ ಸದುಪಯೋಗ ಪಡೆಯಿರಿ

ಸರ್ಕಾರಿ ಸುರಕ್ಷಾ ಯೋಜನೆಗಳ ಸದುಪಯೋಗ ಪಡೆಯಿರಿ  Avail the benefits of government safety schemes

ಲೋಕದರ್ಶನ ವರದಿ 

ಕಾರವಾರ 29: ಬಡ ಹಾಗೂ ಕೂಲಿ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗಾಗಿ ಸರ್ಕಾರ ಕಡಿಮೆ ಪ್ರೀಮಿಯಂನಲ್ಲಿ ನೀಡುತ್ತಿರುವ ಪಿಎಂ-ಜೆಜೆಬಿವೈ, ಪಿಎಂಎಸ್ಬಿವೈ ಹಾಗೂ ಎಪಿವೈ ಸೇರಿದಂತೆ ವಿವಿಧ ಸುರಕ್ಷಾ ಯೋಜನೆಗಳಿಗೆ ಕಡ್ಡಾಯವಾಗಿ ನೋಂದಾಯಿಸಿಕೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೈ. ದಾಸನಕೊಪ್ಪ ಹೇಳಿದರು.  

ಮಂಗಳವಾರ ಮುಂಡಗೋಡ ತಾಲ್ಲೂಕಿನ ಹುಣಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿವೇರಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ನರೇಗಾ ಕಾಮಗಾರಿ ಸ್ಥಳದಲ್ಲಿ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿವಿಧ ಸರ್ಕಾರಿ ಯೋಜನೆಗಳ ಮಾಹಿತಿ ವಿನಿಮಯ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ನರೇಗಾ ಯೋಜನೆಯಡಿ ಕೂಲಿ ದರ ಹೆಚ್ಚಳವಾಗಿರುವುದರಿಂದ ಕುಟುಂಬವೊಂದು ವರ್ಷಕ್ಕೆ 47,750 ವರೆಗೆ ಆದಾಯ ಗಳಿಸಲು ಸಾಧ್ಯವಿದೆ. ಆದರೆ ದುಡಿಮೆಯ ಆದಾಯದೊಂದಿಗೆ ಕುಟುಂಬದ ಆರ್ಥಿಕ ಭದ್ರತೆಗಾಗಿ ಸುರಕ್ಷಾ ಯೋಜನೆಗಳಿಗೂ ನೋಂದಣಿ ಮಾಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.  

ಆರ್ಥಿಕ ಸಾಕ್ಷರತಾ ಸಲಹೆಗಾರ ಗೌರೀಶ ಕುಲಕರ್ಣಿ ಮಾತನಾಡಿ, ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಯುಪಿಐ, ಆಧಾರ್ ಆಧಾರಿತ ಪಾವತಿ ಮತ್ತು ಎಟಿಎಂ ಕಾರ್ಡ್ಗಳ ಸುರಕ್ಷಿತ ಬಳಕೆ ಹಾಗೂ ಅಪರಿಚಿತರಿಗೆ ಒಟಿಪಿ ಮತ್ತು ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳದಂತೆ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸತೀಶ್, ಎಲ್‌ಐಸಿ ಸಂಯೋಜಕ ಕಿರಣ್ ಜೋತೆಪ್ಪನವರ, ತಾಂತ್ರಿಕ ಸಹಾಯಕ ವಿನಾಯಕ ಆಚಾರಿ ಸೇರಿದಂತೆ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.