ಚಾಮರಾಜನಗರ, ನ. 4: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಮುಖ್ಯಮಂತ್ರಿ ಮಾತನಾಡಿದ್ದಾರೆ ಎನ್ನಲಾದ ವೈರಲ್ ಆದ ಆಡಿಯೋ ಕುರಿತು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನಸ್ಸಿನಲ್ಲಿ ಇದ್ದುದನ್ನು ಹೇಳಿದ್ದಾರೆ. ಆಡಿಯೋ, ಅಸಲಿಯೋ ನಕಲಿಯೋ ಎಂಬ ಜಿಜ್ಞಾಸೆಯಿದೆ. ಒಂದು ವೇಳೆ ಅದು ಸತ್ಯವಿದ್ದರೇ, ಅವರು ಮಾತನಾಡಿದರೂ ತಪ್ಪೇನಿಲ್ಲ. ಅದರಲ್ಲಿ ಯಾರಿಂದ ಸರ್ಕಾರ ರಚಿಸಿದ್ದೇವೆ ಎಂದು ಹೇಳಿದ್ದಾರೆ ಅಷ್ಟೇ ಎಂದರು.
ರಾಜೀನಾಮೆ ನೀಡಿದ 17 ಮಂದಿ ಅನರ್ಹರಲ್ಲ, ಅತೃಪ್ತ ಶಾಸಕರು. ಮೈತ್ರಿ ಸರ್ಕಾರದ ಮೊದಲ ಅತೃಪ್ತ ಶಾಸಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು. ಮೈತ್ರಿ ಸರ್ಕಾರದ ವಿರುದ್ಧ ಮೊದಲು ಅತೃಪ್ತಿ ವ್ಯಕ್ತಪಡಿಸಿದ್ದೇ ಅವರು ಎಂದರು.
ಅತೃಪ್ತ ಶಾಸಕರು ರಾಜೀನಾಮೆ ನೀಡದಿದ್ದರೇ ಸರ್ಕಾರ ಎಲ್ಲಿ ರಚನೆಯಾಗುತ್ತಿತ್ತು ?. ಯಡಿಯೂರಪ್ಪ ಅವರು ಅತೃಪ್ತ ಶಾಸಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಹೇಳಿರುವುದಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಸಿದ್ದರಾಮಯ್ಯ ಕಾಡಿ ಬೇಡಿ ವಿಪಕ್ಷ ನಾಯಕರಾಗಿದ್ದಾರೆ. ಕಾಂಗ್ರೆಸ್ ಸೋತು ಸುಣ್ಣವಾಗಿರುವುದರಿಂದ ಆಡಿಯೋ ವೈರಲ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಬೇರೆ ಯಾವ ವಿಷಯಗಳಿಲ್ಲ ಎಂದು ಟೀಕಿಸಿದರು.
ಉಪಚುನಾವಣೆ ಬಳಿಕ ಸರ್ಕಾರ ಬೀಳಲಿದೆ, ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಪ್ರತಿಪಕ್ಷಗಳ ಮಾತಿನಲ್ಲಿ ಯಾವುದೇ ಹುರುಳಿಲ್ಲ.
ಮಧ್ಯಂತರ ಚುನಾವಣೆ ಎಂಬುದು ಕೇವಲ ವಿರೋಧ ಪಕ್ಷಗಳ ಕನಸು ಎಂದು ಅವರು ವ್ಯಂಗ್ಯವಾಡಿದರು.