ಚೆನ್ನೈ, ಜನವರಿ 27 ನಗರದ ಮೈಲಾಪುರ ಪ್ರದೇಶದ ತಮಿಳು ಪತ್ರಿಕೆ 'ತುಘಲಕ್' ಸಂಪಾದಕ ಎಸ್.ಗುರುಮೂರ್ತಿ ಅವರ ನಿವಾಸದಲ್ಲಿ ಬಾಂಬ್ ಸ್ಫೋಟಿಸಲು ಯತ್ನಿಸಿದ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.ಈ ಪ್ರದೇಶದಲ್ಲಿ ಇದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆಯಲಾದ ಇಬ್ಬರು ಪೆರಿಯಾರ್ ಪರ ಸಂಘಟನೆಯವರು ಎಂದು ತಿಳಿದುಬಂದಿದ್ದು, ಅವರನ್ನು ವಿಚಾರಣೆಗೊಳಪಡಿಸಲಾಗಿದೆ.ಮೈಲಾಪುರ ಪ್ರದೇಶದ ಗುರುಮೂರ್ತಿಯವರ ನಿವಾಸಕ್ಕೆ ಅಪರಿಚಿತ ವ್ಯಕ್ತಿಗಳ ಗುಂಪು ದ್ವಿ ಚಕ್ರ ವಾಹನಗಳಲ್ಲಿ ಬಂದು ಪೆಟ್ರೋಲ್ ಬಾಂಬ್ ಎಸೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಕೂಡಲೇ ಧಾವಿಸಿದ ಡಿಸಿಪಿ ತನಿಖೆ ನಡೆಸಿದ್ದರು. ನಂತರ ಈ ಘಟನೆಯನ್ನು ಎಸ್. ಗುರುಮೂರ್ತಿ ಟ್ವೀಟರ್ ನಲ್ಲಿ ದೃಢಪಡಿಸಿದ್ದಾರೆ. ತಾವು 1986ರಿಂದ ಬೆದರಿಕೆಗೆ ಸಂಬಂಧ ಸಮಸ್ಯೆ ಎದುರಿಸುತ್ತಿರುವುದಾಗಿ, ಭಾನುವಾರ ಬೆಳಗಿನ ಜಾವ ನಡೆದ ಘಟನೆ ಹಿನ್ನೆಲೆಯಲ್ಲಿ ತಮ್ಮ ಸುರಕ್ಷತೆ ಹಾಗೂ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.
1971ರಲ್ಲಿ ಸೇಲಂನಲ್ಲಿ ನಡೆದಿದ್ದ ಘಟನೆ ಸಂಬಂಧ ತುಘಲಕ್ ತಮಿಳು ನಿಯತಕಾಲಿಕೆ ತನ್ನ ಹಳೆಯ ಲೇಖನಗಳನ್ನು ಮರು ಪ್ರಕಟಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸಂಪಾದಕ ಗುರುಮೂರ್ತಿ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಸುಮಾರು 50 ವರ್ಷಗಳ ಹಿಂದೆ ಸೇಲಂ ನಲ್ಲಿ ಪೆರಿಯಾರ್ ನೇತೃತ್ವದಲ್ಲಿ ನಡೆದಿದ್ದ ಮೂಢನಂಬಿಕೆ ವಿರೋಧಿ ಸಮಾವೇಶದಲ್ಲಿ ಭಗವಾನ್ ಶ್ರೀರಾಮ ಹಾಗೂ ಸೀತಾ ದೇವಿಯ ಬೆತ್ತಲೆ ಪ್ರತಿಕೃತಿಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು ಎಂಬ ವಿಷಯ ಪ್ರಸಕ್ತ ತಮಿಳುನಾಡು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.