ಬೆಂಗಳೂರು, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಸಹೋದರಿ ಸುನೀತಾ ಅವರ ಮೊಮ್ಮಗ ನಿರಂತರ್ ಗಣೇಶ್, ಬಿಜೆಪಿಯಿಂದ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧತೆ ಆರಂಭಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಲ್ಲಿದ್ದ ನಿರಂತರ್ ಗಣೇಶ್, ಇದೀಗ ಬಿಜೆಪಿಯಿಂದ ರಾಜಕೀಯ ಪರೀಕ್ಷೆಗೆ ಕಸರತ್ತು ಆರಂಭಿಸಿದ್ದಾರೆ.
ಎಂ.ಎಸ್ ರಾಮಯ್ಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಥರ್ೊಪೆಡಿಕ್ ವೈದ್ಯರಾಗಿರುವ ನಿರಂತರ್
2017 ರಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು ಕೆಪಿಸಿಸಿ ವೈದ್ಯಕೀಯ ವಿಭಾಗದ ಅಧ್ಯಕ್ಷರಾಗಿದ್ದರು. 2018 ರ ವಿಧಾನಸಭಾ ಚುನಾವಣೆಗೆ ಹೆಬ್ಬಾಳ ಅಥವಾ ಕಡೂರು ಕ್ಷೇತ್ರದ ಆಕಾಂಕ್ಷಿಯಾಗಿದ್ದ ನಿರಂತರ್ ಗೆ ಟಿಕೆಟ್ ಸಿಗಲಿಲ್ಲ. ಹೀಗಾಗಿ ಕೆಲವು ತಿಂಗಳ ಹಿಂದಷ್ಟೆ ಕಾಂಗ್ರೆಸ್ ತೊರೆದಿದ್ದರು.
ಇದೀಗ ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ದೆಸಲು ಅವಿರತ ಪ್ರಯತ್ನದಲ್ಲಿ ನಿರತರಾಗಿದ್ದಾರೆ.
ಈಗಾಗಲೇ ಬಿಜೆಪಿ ನಾಯಕರಾದ ಆರ್.ಅಶೋಕ್, ಶ್ರೀರಾಮುಲು ಹಾಗೂ ಅಶ್ವತ್ಥ್ ನಾರಾಯಣ್ , ಸದಾನಂದಗೌಡ ಸೇರಿದಂತೆ ಹಲವು ಬಿಜೆಪಿ ಹಾಗೂ ಆರ್.ಎಸ್.ಎಸ್. ನಾಯಕರ ಮೂಲಕ ಲಾಬಿ ಶುರುಮಾಡಿದ್ದಾರೆ.
ಅನರ್ಹ ಶಾಸಕರ ಪ್ರಕರಣ ಸುಪ್ರಿಂಕೋರ್ಟ್ನಲ್ಲಿ ವಿಚಾರಣೆಯಲ್ಲಿರುವುದರಿಂದ 17 ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು ಸದ್ಯಕ್ಕೆ ಅನುಮಾನ. ಹಾಗೊಂದು ವೇಳೆ ಚುನಾವಣೆ ನಡೆದರೂ ಈ ಕ್ಷೇತ್ರದಲ್ಲಿ ಅಭ್ಯರ್ಥಿ ಯಾರು ? ಎನ್ನುವುದನ್ನು ಅನರ್ಹ ಶಾಸಕ ಗೋಪಾಲಯ್ಯ ಅವರ ಅಭಿಪ್ರಾಯದ ಮೇಲೆ ಬಿಜೆಪಿ ನಾಯಕರು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಮತ್ತೊಂದೆಡೆ ನಿರಂತರ್ ಗಣೇಶ್ ತಮ್ಮ ಅಜ್ಜ ಎಸ್.ಎಂ.ಕೃಷ್ಣ ಪ್ರಭಾವ ಬೀರಿ ಕಮಲದ ಅಭ್ಯರ್ಥಿಯಾಗಲು ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿ ಹಾಗೂ ಸಂಘಪರಿವಾರದ ನಾಯಕರನ್ನು ಈ ಸಂಬಂಧ 2-3 ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಹಾಗೂ ತಮ್ಮ ಕುಟುಂಬ ರಾಜಕೀಯ ವಲಯದಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟುಕೊಂಡು ಟಿಕೆಟ್ ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ವೇಳೆ ಕಮಲದ ಚಿಹ್ನೆ ಸಿಗದೇ ಹೋದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಿರಂತರ್ ಗಣೇಶ್, ನಮಗೆ ರಾಜಕಾರಣ ಎನ್ನುವುದು ರಕ್ತಗತವಾಗಿ ಹರಿದುಬಂದಿದೆ. ತಾತ ರಾಜಕಾರಣದಲ್ಲಿದ್ದಾರೆ. ಮುತ್ತಾತ ಕೂಡ ರಾಜಕಾರಣದಲ್ಲಿಯೇ ಇದ್ದವರು. ವೈದ್ಯನಾಗಿ ಹಲವು ಬಾರಿ ರೋಗಿಗಳಿಗೆ ಉಚಿತ ಸೇವೆ ಸಲ್ಲಿಸಿ, 200 ಆರೋಗ್ಯ ಶಿಬಿರಗಳನ್ನು ಮಾಡಿದ್ದೇನೆ. ಜನರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಿದ್ದೇನೆ. ಹೀಗಾಗಿ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಉಪಚುನಾವಣೆಯಲ್ಲಿ ಸ್ಪರ್ದೆಸಲು ಸಿದ್ಧತೆ ನಡೆಸಿದ್ದೇನೆ ಎಂದರು.
ಬಿಜೆಪಿ ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದು, ಈ ಸಂಬಂಧ ಹಲವು ಬಿಜೆಪಿ ನಾಯಕರನ್ನ ಭೇಟಿ ಮಾಡಿ,ಚರ್ಚಿಸಿದ್ದೇನೆ. ಮುಂದೆ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ ಎಂದರು.