ಪ್ಯಾರಿಸ್, ನವೆಂಬರ್ 6: ಅಲ್-ಖೈದಾ ಉಗ್ರ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಆಫ್ರಿಕನ್ ಜಿಹಾದಿ ಗುಂಪಿನ ಉಗ್ರಗಾಮಿ ನಾಯಕ ಕಳೆದ ತಿಂಗಳು ಮಾಲಿಯಲ್ಲಿ ಹತನಾಗಿದ್ದಾನೆ ಎಂದು ಫ್ರಾನ್ಸ್ ಘೋಷಿಸಿದೆ. ಗ್ರೂಪ್ ಟು ಸಪೋರ್ಟ್ ಇಸ್ಲಾಂ ಆಂಡ್ ಮುಸ್ಲಿಮ್ಸ್ (ಜಿಎಸ್ಐಎಂ) ಎಂಬ ಗುಂಪಿನ ಸಹ-ಸಂಸ್ಥಾಪಕ ಮೊರೊಕನ್ ಅಲಿ ಮೇಚೌ ಎಂಬಾತ ಮಾಲಿಯಲ್ಲಿ ಅಕ್ಟೋಬರ್ 8ರಂದು ರಾತ್ರಿ ಮಾಲಿಯನ್ ಸೈನಿಕರು, ಅಮೆರಿಕ ಬೆಂಬಲದೊಂದಿಗೆ ನಡೆಸಿದ ದಾಳಿಯಲ್ಲಿ ಹತನಾಗಿದ್ದಾನೆ ಎಂದು 'ದಿ ನ್ಯಾಷನಲ್' ವರದಿ ಮಾಡಿದೆ. ಮಂಗಳವಾರ ಪಶ್ಚಿಮ ಆಫ್ರಿಕಾದ ಅಧಿಕೃತ ಭೇಟಿಯಿಂದ ಸರ್ಕಾರಿ ವಿಮಾನದಲ್ಲಿ ಹಿಂದಿರುತ್ತಿದ್ದ ಫ್ರೆಂಚ್ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲ್ ಅವರು ಈ ವಿಷಯ ಪ್ರಕಟಿಸಿದ್ದಾರೆ. ಜಿಹಾದಿ ದಾಳಿಯಲ್ಲಿ ಹಲವು ಸೈನಿಕರು ಸಾವನ್ನಪ್ಪಿದ ನಂತರ ಪಾರ್ಲ್ ಅವರು ಯುರೋಪಿಯನ್ ಪಡೆಗಳಿಗೆ ಬೆಂಬಲ ಸೂಚಿಸಿದಾಗ ಈ ಪ್ರಕಟಣೆ ಹೊರಬಿದ್ದಿದೆ. ಅಲಿ ಮೇಚೌ ಎಂಬಾತನ ಅಮೆರಿಕ ಮತ್ತು ಸಹೇಲ್ನ, ಎರಡನೇ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿದ್ದ ಎಂದು ಪಾರ್ಲ್ ತಿಳಿಸಿದರು. ಸಹೇಲ್ನಲ್ಲಿ ನಡೆದ ಅತಿದೊಡ್ಡ ದಾಳಿಯ ಹೊಣೆಯನ್ನು ಜಿಎಸ್ಐಎಂ ವಹಿಸಿಕೊಂಡಿದೆ. ಫ್ರಾನ್ಸ್, ಆಫ್ರಿಕನ್ ನೆರೆ ಹೊರೆಯ ದೇಶಗಳು ಮತ್ತು ವಿಶ್ವಸಂಸ್ಥೆಯ ಸಹಾಯದ ಹೊರತಾಗಿಯೂ ಮಾಲಿಯ ಸೈನ್ಯವು ದಂಗೆಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದೆ. ಮಂಗಳವಾರ ಮಾಲಿಯಿಂದ ಹೊರಡುವ ಮೊದಲು, 2014 ರಲ್ಲಿ ಸಹೇಲ್ನಲ್ಲಿ ತನ್ನ 4,500 ಬಲಿಷ್ಠ ಬಾರ್ಖ್ನ್ ಪಡೆಗಳನ್ನು ನಿಯೋಜಿಸಿದ್ದ ಫ್ರಾನ್ಸ್, ಮಿಲಿಟರಿ ಸಹಾಯವನ್ನು ಹೆಚ್ಚಿಸಲು ಯುರೋಪಿಯನ್ ಪಾಲುದಾರರನ್ನು ಮನವೊಲಿಸುವ ಪ್ರಯತ್ನದಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ಫ್ರೆಂಚ್ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.