ಸಂಗೀತ ಲೋಕದ ಫೀನಿಕ್ಸ್‌ ಹಕ್ಕಿ ಆಶಾ ಭೋಸ್ಲೆ

ಸಂಗೀತ ಲೋಕದ ಫೀನಿಕ್ಸ್‌ ಹಕ್ಕಿ ಆಶಾ ಭೋಸ್ಲೆ Asha Bhosle, the phoenix of the music world

ಎಂಟು ದಶಕಗಳಿಗೂ ಹೆಚ್ಚು ಕಾಲ ತಮ್ಮ ಸುಮಧುರ ಕಂಠದ ಮೂಲಕ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿದ ಸಂಗೀತ ಲೋಕದ ಸಾಮ್ರಾಜ್ಞೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ಆಶಾ ಭೋಸ್ಲೆ ಅವರು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಸಾವಿರಾರು ವೈವಿಧ್ಯಮಯ ಗೀತೆಗಳಿಗೆ ಜೀವ ತುಂಬಿದ ಅವರ ಸಾಧನೆಯನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್‌ ಅಧಿಕೃತವಾಗಿ ಗುರುತಿಸಿದೆ. ಅವರ ಧ್ವನಿ ಕೇವಲ ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಕನ್ನಡ, ಮರಾಠಿ, ಬೆಂಗಾಲಿ, ತೆಲುಗು, ತಮಿಳು ಸೇರಿದಂತೆ ಭಾರತದ ಅಂದಾಜು 20ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳ ಹಾಡುಗಳನ್ನು ಹಾಡಿರುವರು. ಕೇವಲ ಭಾರತೀಯ ಭಾಷೆಗಳಲ್ಲಿ ಅಷ್ಟೇ ಅಲ್ಲದೇ, ವಿದೇಶಿ ಭಾಷೆಗಳಲ್ಲೂ ಹಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. 

ಆಶಾ ಭೋಸ್ಲೆ ಅವರು ಸಪ್ಟೆಂಬರ್ 8, 1933ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜನಿಸಿದರು. ಅವರ ತಂದೆ ಪಂಡಿತ್ ದೀನಾನಾಥ ಮಂಗೇಶ್ಕರ್, ತಾಯಿ ಶೇವಂತಿ. ಅವರ ತಂದೆ ಪ್ರಸಿದ್ಧ ಶಾಸ್ತ್ರೀಯ ಗಾಯಕ ಮತ್ತು ರಂಗಭೂಮಿ ಕಲಾವಿದರು. ಹಾಗಾಗಿ ಅವರ ಇಡೀ ಕುಟುಂಬ ಸಂಗೀತವನ್ನೇ ಆರಾಧಿಸುತ್ತಿತ್ತು. ಆಶಾ ಅವರ ಅಕ್ಕ ಲತಾ ಮಂಗೇಶ್ಕರ ಕೂಡಾ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದರು. ತಂದೆಯೇ ಬಳಿಯೇ ಸಂಗೀತದ ಓನಾಮ ಕಲಿತ ಆಶಾಗೆ 9ನೆಯ ವಯಸ್ಸಿನಲ್ಲಿಯೇ ತಂದೆಯ ಅಗಲಿಕೆಯ ಶಾಕ್ ಎದುರಾಯಿತು. ತಂದೆಯ ಅಕಾಲಿಕ ನಿಧನ ಆಶಾ ಅವರ ಕುಟುಂಬವನ್ನು ಸಂಕಷ್ಟಕ್ಕೆ ದೂಡಿತು. ಆಶಾರ ಅಕ್ಕ ಲತಾ ಮಂಗೇಶ್ಕರ್ ಕುಟುಂಬದ ಜವಾಬ್ದಾರಿ ವಹಿಸಿಕೊಂಡರು. ಆಶಾ ಕೂಡ ಕುಟುಂಬದ ನಿರ್ವಹಣೆಗೆ ನಿಂತರು. ಆಶಾ ಚಿಕ್ಕ ವಯಸ್ಸಿನಲ್ಲಿಯೇ ಗಾಯನವನ್ನೇ ವೃತ್ತಿಯನ್ನಾಗಿ ಆರಿಸಿಕೊಂಡರು.  

1943ರಲ್ಲಿ ಆಶಾಗೆ ಆಗಿನ್ನು 10 ವಯಸ್ಸು. ಆಗಲೇ ಮರಾಠಿಯ ‘ಮಾಝಾ ಬಾಲ್‌’ ನಲ್ಲಿ ‘ಚಲಾ ಚಲಾ ನವ ಬಾಲಾ...’ ಎಂಬ ಹಾಡು ಹಾಡುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು. ತಮ್ಮ ಇಂಪಾದ ದನಿಯಿಂದ ಪ್ರೇಕ್ಷಕರ ಗಮನ ಸೆಳೆದರು. 1948ರಲ್ಲಿ ‘ಚುನ್ ಅರಿಯಾ’ ಹಿಂದಿ ಚಿತ್ರದ್ಲಲಿಯ ‘ಸಾವನ್ ಆಯಾ..’ ಗೀತೆಗೆ ದನಿಯಾದರು. ಆದರೇ ಅದೇ ವರ್ಷ ‘ಅಂಧೋನ ಕಿ ದುನಿಯಾ’ ಚಿತ್ರದಲ್ಲಿನ ಅವರ ಹಾಡುಗಳು ‘ಚುನ್ ಆರಿಯಾ’ ಗಿಂತ ಮೊದಲೇ ಬಿಡುಗಡೆಯಾದವು. 1949ರಲ್ಲಿ ಅವರು ಮೊದಲ ಬಾರಿ ‘ರಾತ್ ಕಿ ರಾಣಿ’ ಸಿನೆಮಾಗೆ ಹಿಂದಿ ಚಲನಚಿತ್ರ ಗೀತೆಯನ್ನು ಹಾಡಿದರು. 1957ರಲ್ಲಿ ಓ.ಪಿ.ನಯ್ಯರ್ ಸಂಗೀತ ಸಂಯೋಜಿಸಿದ್ದ ‘ನಯಾ ದೌರ್‌’ ಚಿತ್ರದಲ್ಲಿನ ‘ಉಡ್ ಜಬ್ ಜಬ್ ಜುಲ್ಪೇನ್ ತೆರಿ’ ಹಾಡಿಗೆ ದನಿಯಾದರು. ಈ ಗೀತೆ ಆಶಾ ಅವರಿಗೆ ಹೊಸತನ ತಂದುಕೊಟ್ಟಿತು. ಅವರನ್ನು ಚಿತ್ರರಂಗದಲ್ಲಿ ಗುರುತಿಸುವಂತೆ ಮಾಡಿತು. ಸಂಗೀತ ನಿರ್ದೇಶಕ ಆರ್‌.ಡಿ.ಬರ್ಮನ್ ಮತ್ತು ಆಶಾ ಭೋಸ್ಲೆ ಅವರ ಜೋಡಿ ಬಾಲಿವುಡ್ ಸಂಗೀತದ ದಿಕ್ಕನ್ನೇ ಬದಲಿಸಿತು. ಚಂದಾ ಮಾಮಾ ದೂರ್ ಕೆ, ಆಜಾ ಆಜಾ ಮೇನ್ ಹೂಂ ಪ್ಯಾರ್ ತೇರೆ, ಓ ಹಸೀನಾ ಜುಲ್ಪೋವಾಲಿ, ಪಿಯಾ ತು ಅಬ್ ತೋ ಆಜಾ, ದಮ್ ಮಾರೊ ದಮ್, ಚುರಾ ಲಿಯಾ ಹೈ ತುಮ್ನೆ ಹೀಗೆ ಅನೇಕ ಹಾಡುಗಳು ಸಂಗೀತ ಪ್ರಿಯರನ್ನು ತಲೆದೂಗುವಂತೆ ಮಾಡಿದವು. ಭಾರತೀಯ ಸಂಗೀತ ಶಾಸ್ತ್ರದ ಮತ್ತು ಪಾಶ್ಚತ್ಯ ಬೀಟ್ಸ್‌ ಸಮ್ಮಿಶ್ರದಂತೆ ಇರುವ ಅವರ ಹಾಡುಗಳು ಇಂದಿಗೂ ಯುವ ಪೀಳಿಗೆಯನ್ನು ಹುಚ್ಚೆದ್ದು ಕುಣಿಸುತ್ತವೆ. 

ನಂತರದ ದಿನಗಳಲ್ಲಿ ಸಾಜಿದ್ ಹುಸೇನ್, ಓ.ಪಿ.ನಯ್ಯರ್ ಮುಂತಾದ ಸಂಗೀತ ನಿರ್ದೇಶಕರು ಆಶಾ ಅವರಿಗೆ ಪ್ರೋತ್ಸಾಹ ನೀಡಿದರು. 1990ರ ದಶಕ ಮತ್ತು 2000 ದಶಕದ ಆರಂಭದಲ್ಲಿ ಆಶಾ ಆ ಯುಗದ ಆಧುನಿಕ, ಪಾಪ್ ಪ್ರೇರಿತ ಶೈಲಿಗೆ ಹೊಂದಿಕೊಳ್ಳುವ ಮೂಲಕ ತಮ್ಮ ವೃತ್ತಿ ಜೀವನವನ್ನು ಕಾಯ್ದುಕೊಂಡರು. ಎ.ಆರ್‌.ರೆಹಮಾನ್ ಅವರೊಂದಿಗೆ ‘ತನ್ಹಾ ತನ್ಹಾ’ ಮತ್ತು ‘ರಂಗೀಲಾ ರೇ’ ಹಾಡುಗಳು ಸೂಪರ್ ಹಿಟ್ ಆದವು. ಅವರು ಮೀನಾಕುಮಾರಿ, ಮಧುಬಾಲಾ, ಜೀನತ್ ಅಮನ್ ಅವರಿಂದ ಕಾಜೋಲ್, ಊರ್ಮಿಲಾ ಮಾತೋಂಡ್ಕರ್ ವರೆಗೆ ಅನೇಕ ಪ್ರಮುಖ ತಾರೆಯರಿಗೆ ಮತ್ತು ಪದ್ಮಿನಿ, ವೈಜಯಂತಿ ಮಾಲಾ ಅವರಂತಹ ದಕ್ಷಿಣ ನಟಿಯರಿಗೆ ಧ್ವನಿಯಾಗಿದ್ದರು. ಅವರು ಖಾಸಗಿ ಅಲ್ಬಮ್‌ಗಳಿಗೂ ಹಾಡಿದ್ದರು. ಭಾರತ ಮತ್ತು ವಿದೇಶಗಳಲ್ಲಿ ಲೈವ್ ಸಂಗೀತ ಕಾರ್ಯಕ್ರಮಗಳನ್ನು ನೀಡಿರುವರು. ಅವರು ಹಾಡಿದ ಕೊನೆಯ ಹಾಡು 2022ರಲ್ಲಿ ಜಾಕಿ ಶ್ರಾಫ್ ಅವರು ನಟಿಸಿದ್ದ ‘ಲೈಫ್ ಈಸ್ ಗುಡ್‌’ ಸಿನೇಮಾದ ‘ರುತ್ ಭೀಗೆ ತಾನೆ’, 2023ರಲ್ಲಿ ಅವರು ತಮ್ಮ 90ನೇ ಹುಟ್ಟುಹಬ್ಬವನ್ನು ಆಚರಿಸಲು ದುಬೈನಲ್ಲಿ ನಡೆದ ವಿಶೇಷ ಸಂಗೀತ ಕಛೇರಿ ‘ಆಶಾ 90 ಲೈವ್ ಇನ್ ಕಾನ್ಸ್‌ರ್ಟಿ’ ನಲ್ಲಿ ಪ್ರದರ್ಶನ ನೀಡಿದ್ದರು. ಆಶಾ ಭೋಸ್ಲೆ ತಮ್ಮ 62ನೇ ವಯಸ್ಸಿನಲ್ಲಿ ಹಾಡಿದ ರಂಗೀಲಾ ಚಿತ್ರದ ತನಹಾ ತನಹಾ, ರಂಗೀಲಾ ರೆ ಗೀತೆಗಳು ಸಂಗೀತ ಪ್ರಿಯರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ್ದವು. ಅವರು ತಮ್ಮ 72ನೇ ವಯಸ್ಸಿನಲ್ಲಿ ಹಾಡಿದ ತಮಿಳು ಚಿತ್ರ ಚಂದ್ರಮುಖಿ ಚಿತ್ರದ ಹಾಡುಗಳು ಮತ್ತು ಇತ್ತೀಚಿನ ವರ್ಷದಲ್ಲಿ ಯಶಸ್ಸು ಕಂಡ ಲಕ್ಕಿ ಚಿತ್ರಕ್ಕಾಗಿ ಹಾಡಿದ ಪಾಪ್ ಗಾಯನಗಳು ಅತ್ಯಂತ ಹೆಚ್ಚಿನ ಮಾರಾಟ ಕಂಡ ಧ್ವನಿ ಮುದ್ರಣಗಳಾಗಿವೆ. 

ಆಶಾ ಅವರ ವೈಯಕ್ತಿಕ ಜೀವನ ಅಷ್ಟು ಸುಲಭವಾಗಿರಲಿಲ್ಲ. ಅವರ ಜೀವನ ಯಾವ ಸಿನೇಮಾ ಕಥೆಗೂ ಕಡಿಮೆ ಇಲ್ಲ. ಆಶಾ ಅವರು 16ನೇ ವಯಸ್ಸಿನಲ್ಲಿ ಅಕ್ಕ ಲತಾ ಮಂಗೇಶ್ಕರ್‌ರ ಕಾರ್ಯದರ್ಶಿ 31 ವರ್ಷದ ಗಣಪತರಾವ್ ಭೋಸ್ಲೆ ಅವರನ್ನು ಪ್ರೀತಿಸಿದರು. ಅವರು ತಮ್ಮ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಗಣಪತರಾವ್‌ರನ್ನು ವಿವಾಹವಾದರು. ಸಂಪ್ರದಾಯಸ್ಥ ಕುಟುಂಬಸ್ಥರಾಗಿದ್ದ ಪತಿ ಮನೆಯವರು ಆಶಾರ ಗಾಯನಕ್ಕೆ ಸಾಥ್ ನೀಡಲಿಲ್ಲ. ಪತಿ ಗಣಪತರಾವ್ ಸಹಕರಿಸಲಿಲ್ಲ. ಅವರಿಗೆ ಮೂವರು ಮಕ್ಕಳು ಹೇಮಂತ್, ವರ್ಷ ಮತ್ತು ಆನಂದ. ಅವರ ದಾಂಪತ್ಯ ಹೆಚ್ಚು ಕಾಲ ಉಳಿಯಲಿಲ್ಲ. 1960ರಲ್ಲಿ ಅವರು ಪತಿಯಿಂದ ದೂರವಾದರು. ಆ ವೇಳೆ ಅವರು ಮೂರನೇ ಮಗುವಿನ ಗರ್ಭಿಣಿಯಾಗಿದ್ದರು. ಮೂರನೇ ಮಗವನ್ನು ಹೊಟ್ಟೆಯಲ್ಲಿ ಹೊತ್ತುಕೊಂಡು 4 ತಿಂಗಳು ಗರ್ಭಿಣಿಯಾಗಿದ್ದಾಗ ಅವರ ಆರೋಗ್ಯ ಹದಗೆಟ್ಟಿತ್ತು. ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದರು. ಆದರೆ ದೇವರು ಕೈ ಬಿಡಲಿಲ್ಲ. ‘ನನ್ನ ಹೊಟ್ಟೆಯಲ್ಲಿರುವ ನನ್ನ ಮಗು ನನ್ನನ್ನು ಸಾವಿನ ದವಡೆಯಿಂದ ಪಾರು ಮಾಡಿತು’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅವರ ಜೀವನದಲ್ಲಿ ನಡೆದ ಮತ್ತೊಂದು ನೋವಿನ ಸಂಗತಿ ಎಂದರೆ, 2012ರಲ್ಲಿ ಮಗಳು ವರ್ಷಾ 56ನೇ ವಯಸ್ಸಿನಲ್ಲಿ ಗಂಡಿಟ್ಟುಕೊಂಡು ಸಾವನ್ನಿಪ್ಪಿದ್ದರು. ಅಂಕಣಕಾರರಾಗಿದ್ದ ವರ್ಷಾ ‘ದಿ ಸಂಡೇ ಅಬ್ಸ್‌ವರ​‍್ಸ‌’ ಮತ್ತು ‘ಜೆಂಟಲ್‌ಮ್ಯಾನ್‌’ ನಿಯತಕಾಲಿಕೆಗಳಿಗೆ ಲೇಖನ ಬರೆಯುತ್ತಿದ್ದರು. ಹಿರಿಯ ಮಗ ಹೇಮಂತ್ ಭೋಸ್ಲೆ ಮರಾಠಿ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದು, ಅವರು ಕ್ಯಾನ್ಸರ್‌ನಿಂದ ಬಳಲಿ ತಮ್ಮ 66ನೇ ವಯಸ್ಸಿನಲ್ಲಿ ನಿಧನರಾದರು. ನೋವಿನಲ್ಲಿಯೇ ಬೆಂದ ಆಶಾ, ತಮ್ಮ ಇಡೀ ಜೀವನವನ್ನು ಸಂಗೀತಕ್ಕಾಗಿಯೇ ಮುಡಿಪಾಗಿಟ್ಟರು.  

ಆಶಾ ಭೋಸ್ಲೆ ಅವರು 1980ರಲ್ಲಿ ಪ್ರಸಿದ್ಧ ಸಂಗೀತ ಸಂಯೋಜಕ ರಾಹುಲ್ ದೇವ್ ಬರ್ಮನ್ ಅವರ ಜೊತೆ ಎರಡನೆಯ ಮದುವೆಯಾಗುತ್ತಾರೆ. ಅವರನ್ನು ಸಂಗೀತ ಉದ್ಯಮದಲ್ಲಿ ‘ಲೆಜೆಂಡರಿ ಕಪಲ್‌’ ಎಂದು ಪರಿಗಣಿಸಲಾಯಿತು. ಆಶಾ ಮತ್ತು ಆರ್‌.ಡಿ.ಬರ್ಮನ್ ಜೋಡಿ ಸಂಗೀತ ಲೋಕದಲ್ಲಿ ಕ್ರಾಂತಿ ಮಾಡಿದರು. ಉಮ್ರಾವ್ ಜಾನ್ ಚಿತ್ರದ ಗಜಲ್‌ಗಳ ಮೂಲಕ ಆಶಾ ತಾನು ಕೇವಲ ಪಾಪ್ ಅಥವಾ ಕ್ಯಾಬರೆ ಹಾಡುಗಳಿಗಷ್ಟೇ ಸೀಮಿತವಲ್ಲ, ಶಾಸ್ತ್ರಿಯ ಗಾಯನದಲ್ಲೂ ಸೈ ಎಂಬುದನ್ನು ಸಾಬೀತುಪಡಿಸಿದರು. ಗಾಯನದ ಜತೆಗೆ ‘ಮೈ’ ಚಿತ್ರದಲ್ಲಿಯೂ ಅಭಿನಯಿಸಿದರು. ಆ ಮೂಲಕ ನಟಿಯಾಗಿಯೂ ಚಿರಪರಿಚಿತರಾದರು. ಸಂಗೀತದ ಹೊರತಾಗಿಯೂ ಅವರು ಅಡುಗೆ ಕಲೆಯಲ್ಲಿ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಹೋಟೆಲ್ ಉದ್ಯಮದಲ್ಲಿ ಆಸಕ್ತಿಯ್ನು ಬೆಳೆಸಿಕೊಂಡ ಅವರು 2002ರಲ್ಲಿ ಅಂತರರಾಷ್ಟ್ರೀಯ ಬ್ರಾಂಡ್ ಆಶಾಸ್ ರೆಸ್ಟೋರೆಂಟ್‌ನ್ನು ದುಬೈನಲ್ಲಿ ಪ್ರಾರಂಭಿಸಿ, ನಂತರ ಕುವೈತ್, ಬಹ್ರೇನ್, ಬ್ರಿಟನ್ ಸೇರಿ ವಿವಿಧ ದೇಶಗಳ ಪ್ರಮುಖ ನಗರಗಳಲ್ಲಿ ತೆರೆದರು. ವರದಿಗಳ ಪ್ರಕಾರ ಅವರು ಅಂದಾಜು 300ಕೋಟಿಗಳಷ್ಟು ಸಂಪಾದನೆಯನ್ನು ಹೊಂದಿದ್ದರು. 

ಅವರು ಶಾಸ್ತ್ರೀಯ ಸಂಗೀತದಿಂದ ಹಿಡಿದು ಪಾಪ್, ಗಜಲ್ ಮತ್ತು ಜಾನಪದ ಶೈಲಿಯ ಹಾಡುಗಳನ್ನು ಹಾಡಿರುವರು. ಅದರಲ್ಲೂ ಕನ್ನಡಿಗರ ಪಾಲಿಗೆ ಆಶಾ ಭೋಸ್ಲೆ ಎಂದಿಗೂ ಆಪ್ತರು. ‘ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ಏನೋ ಏನೋ, ‘ದೂರದ ಬೆಟ್ಟ’ ಚಿತ್ರದ ಸವಾಲು ಹಾಕಿ ಸೋಲಿಸಿ ಎಲ್ಲರ ಎಂಬಂತಹ ಕ್ರಾಂತಿಕಾರಿ ಗೀತೆಗಳಿಂದ ಹಿಡಿದು ಇತ್ತೀಚಿನ ‘ಮತ್ತೇ ಮುಂಗಾರು’ ಚಿತ್ರದವರೆಗೆ ಅವರು ಹಾಡಿರುವ ಗೀತೆಗಳು ಇಂದಿಗೂ ಸದಾ ಹಸಿರಾಗಿವೆ. ಜೊತೆಗೆ ಕರ್ನಾಟಕದಲ್ಲಿ ಸಾಕಷ್ಟು ಬಾರಿ ಲೈವ್ ಶೋಗಳನ್ನು ಸಹ ನೀಡಿ ಗಮನ ಸೆಳೆದಿದ್ದರು. ಆಶಾ ಭೋಸ್ಲೆ ಎಂಟು ದಶಕಗಳಿಗೂ ಹೆಚ್ಚು ಕಾಲ ಹಾಡಿದರು. ಬದಲಾವಣೆಗೆ ಅವರು ತಮ್ಮನ್ನು ತಾವೇ ಮರುಶೋಧಿಸಿಕೊಂಡರು. ಕಪ್ಪು-ಬಿಳುಪು ಸಿನೇಮಾದಿಂದ ಜಾಗತಿಕ ವೇದಿಕೆಗಳವರೆಗೆ, ವಿನೈಲ್‌ಇಂದ ಸ್ಟ್ರೀಮಿಂಗ್‌ವರೆಗೆ ಅವರು ನಿರಂತರವಾಗಿ ತಮ್ಮ ಧ್ವನಿಯನ್ನು ವಿಕಸಿಸುವ ಮೂಲಕ ಪ್ರಸ್ತುತತೆಯನ್ನು ಉಳಿಸಿಕೊಂಡರು. ಆಶಾ ಭೂತಕಾಲವನ್ನು ವರ್ತಮಾನಕ್ಕೆ ಜೋಡಿಸುವ ನಿರಂತರತೆಯಾಗಿ ಉಳಿದರು. 

ಸಂಗೀತ ಕ್ಷೇತ್ರಕ್ಕೆ ಆಶಾ ಅವರು ನೀಡಿದ ಅನುಪಮ ಕೊಡುಗೆಗಾಗಿ ಹಲವಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. 2000ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 2008ರಲ್ಲಿ ಭಾರತದ ಎರಡನೆಯ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ, ನೈಟೆಂಗಲ್ ಆಫ್ ಏಷ್ಯಾ, ಗ್ರ್ಯಾಮಿ ನಾಮಿನೇಷನ್, ಬಂಗಾ ವಿಭೂಷಣ ಪ್ರಶಸ್ತಿ, ಮಹಾರಾಷ್ಟ್ರ ಭೂಷಣ ಪ್ರಶಸ್ತಿ, 9 ಫಿಲ್ಮ್‌ ಫೇರ್ ಪ್ರಶಸ್ತಿಗಳು, ಲತಾ ದೀನಾನಾತ್ ಮಂಗೇಶ್ಕರ್ ಪುರಸ್ಕಾರ, ಆಮಿಟಿ ಸಾಲ್ಫೋರ್ಡ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟರ್ ಸೇರಿದಂತೆ ಹಲವಾರು ಗೌರವಗಳು ಮತ್ತು ಪ್ರಶಸ್ತಿಗಳು ಲಭಿಸಿವೆ. 2011ರಲ್ಲಿ ಸಂಗೀತ ಇತಿಹಾಸದಲ್ಲಿ ಹೆಚ್ಚು ಧ್ವನಿಮುದ್ರಣಗೊಂಡ ಕಲಾವಿದೆ ಎಂಬ ಗಿನ್ನೆಸ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್‌ ಕೂಡ ಆಶಾರವರ ಹೆಸರಲ್ಲಿದೆ. ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಯಾಗಿ ದಾಖಲೆಯ ಏಳು ಬಾರಿ ಗೌರವ ಪಡೆದಿದ್ದರು. ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ಬಿ.ಎಫ್‌.ಜೆ. ಪ್ರಶಸ್ತಿಗಳು ಸೇರಿದಂತೆ ಹದಿನೆಂಟು ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅವರಿಗೆ ಲಭಿಸಿವೆ. 

ತಮ್ಮ ಸುಮಧುರ ಕಂಠದ ಮೂಲಕ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿ ಸಂಗೀತ ಲೋಕದ ಸಾಮ್ರಾಜ್ಞೆ ಎನಿಸಿದ್ದ ಆಶಾ ಭೋಸ್ಲೆ ಇನ್ನು ನೆನಪು ಮಾತ್ರ. ಭಾರತೀಯ ಸಂಗೀತ ಲೋಕದ ದಿಗ್ಗಜರಾದ ಆಶಾ ಭೋಸ್ಲೆ ಅವರು ಮುಂಬೈನಲ್ಲಿ ಭಾನುವಾರ ಎಪ್ರೀಲ್ 12ರಂದು ನಿಧನರಾದರು. ಈ ಮೂಲಕ ಸಂಗೀತ ಲೋಕದ ಅದ್ಭುತ ಕಂಠವೊಂದು ಮೌನಲೋಕಕ್ಕೆ ಜಾರಿತು. ಆಶಾ ಅವರ ಅಗಲಿಕೆಯಿಂದ ಸಂಗೀತಲೋಕ ಬಡವಾಯಿತು. ಆಶಾ ಭೋಸ್ಲೆ ಅವರನ್ನು ‘ಆಶಾತಾಯಿ’ಎಂದೇ ಪ್ರೀತಿಯಿಂದ ಕರೆಯಲಾಗುತ್ತಿತ್ತು. ಪ್ರತಿ ಹಾಡಿಗೂ ಅವರು ಜೀವ ಮತ್ತು ಭಾವನೆಗಳನ್ನು ತುಂಬುತ್ತಿದ್ದ ರೀತಿ ಇಂದಿಗೂ ಅಪ್ರತಿಮ. ಸಂಗೀತದ ಪಯಣದಾಚೆಗೂ, ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಂತು ಬದುಕು ಕಟ್ಟಿಕೊಂಡ ಮತ್ತು ಸಂಘರ್ಷದ ಹಾದಿಯನ್ನೇ ಶಕ್ತಿಯನ್ನಾಗಿ ಮಾಡಿಕೊಂಡು ಸಾಧಿಸಿದ ಅವರ ಜೀವನ ಪಯಣ ಸ್ಪೂರ್ತಿದಾಯಕವಾದುದು. 


ಸುರೇಶ ಗುದಗನವರ 

ಲೇಖಕರು 

ಧಾರವಾಡ 

9449294694