ಕಲೆಯಿಂದ ಉತ್ಸಾಹ, ಆಯುಷ್ಯ ವೃದ್ಧಿ: ಮಾಜಿ ಸಂಸದ ಸಂಗಣ್ಣ ಕರಡಿ

ಕಲೆಯಿಂದ ಉತ್ಸಾಹ, ಆಯುಷ್ಯ ವೃದ್ಧಿ: ಮಾಜಿ ಸಂಸದ ಸಂಗಣ್ಣ ಕರಡಿ  Art fosters enthusiasm and prolongs life: Former MP Sanganna Karadi

ಕೊಪ್ಪಳ  10: ಕಲೆ ಮತ್ತು ಸಂಸ್ಕೃತಿಯು ಮನುಷ್ಯನ ಬದುಕಿನಲ್ಲಿ ಉತ್ಸಾಹ, ಸಂತಸ ಹಾಗೂ ನೆಮ್ಮದಿಯನ್ನು ಮೂಡಿಸುವುದರ ಜೊತೆಗೆ ಜೀವನವನ್ನು ಅರ್ಥಪೂರ್ಣವಾಗಿಸಿ ಉತ್ಸಾಹ ಆಯುಷ್ಯ ವೃದ್ಧಿಗೊಳಿಸುತ್ತದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.ನಗರದ ಸಾಹಿತ್ಯ ಭವನದಲ್ಲಿ ಕರಾವಳಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಮಹಾಶಕ್ತಿ ಮಹಾಕಾಳಿ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಾಡಿನ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಕಲೆ ಮನುಷ್ಯನ ಮನಸ್ಸಿಗೆ ನೆಮ್ಮದಿ ನೀಡುವ ಶಕ್ತಿಯನ್ನು ಹೊಂದಿದ್ದು, ಕಲೆಯೊಂದಿಗೆ ಬದುಕುವವರು ಆರೋಗ್ಯಕರ ಹಾಗೂ ಸಂತಸದ ಜೀವನ ನಡೆಸಲು ಸಾಧ್ಯವಾಗುತ್ತದೆ,ಕರಾವಳಿ ಭಾಗದ ಜನರ ಜೀವನಶೈಲಿ, ಸಂಸ್ಕೃತಿ ಮತ್ತು ಶಿಸ್ತನ್ನು ಶ್ಲಾಘಿಸಿದ ಅವರು, ಕರಾವಳಿಯ ಜನರಲ್ಲಿ ಶಿಸ್ತು, ಸಮಯಪ್ರಜ್ಞೆ ಹಾಗೂ ಸಂಘಟನಾ ಮನೋಭಾವ ಗಮನಾರ್ಹವಾಗಿದೆ. ಅಲ್ಲಿನ ಕಲೆ, ಜಾನಪದ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳು ರಾಜ್ಯದ ಹೆಮ್ಮೆಯಾಗಿವೆ ಎಂದು ಹೇಳಿದರು.

ಯುವಜನತೆ ಆಧುನಿಕತೆಯ ಜೊತೆಗೆ ನಮ್ಮ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನೂ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು. ಕಲೆ ಕೇವಲ ಮನರಂಜನೆಯ ಸಾಧನವಲ್ಲ; ಅದು ಸಮಾಜವನ್ನು ಒಗ್ಗೂಡಿಸುವ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸುವ ಶಕ್ತಿಯಾಗಿದೆ ಎಂದು ಸಂಗಣ್ಣ ಕರಡಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಪರ ಜಿಲ್ಲಾಧಿಕಾರಿ  ಸಿದ್ದಾರಾಮೇಶ್ವರ  ಮಾತನಾಡಿ ಕರಾವಳಿ ಜನ ಅತ್ಯಂತ ಶಿಸ್ತು ಜನ ಅವರು ಹೋಟೆಲ್ ಉದ್ಯಮದಲ್ಲಿ ಹೆಸರುವಾಸಿಯಾಗಿ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡು.

ಈ ಭಾಗದ ಜನರಿಗೆ ತಮ್ಮ ಭಾಗದ ಕಲೆಗಳನ್ನು ಪರಿಚಯಿಸುತ್ತಾರೆ ಎಂದರು. ಮುಖ್ಯ ಅತಿಥಿಗಳಾಗಿ ಕರಾವಳಿ ಬಳಗದ ಗೌರವಾಧ್ಯಕ್ಷ ಜೀವನ್ ಶೆಟ್ಟಿ, ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಹಾಲಾಡಿಯ ಭಗವತರಾದ ರಾಘವೇಂದ್ರ ಮಯ್ಯ ಪಾಲ್ಗೊಂಡಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾವಳಿ ಬಳಗದ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕರ್ ಶೆಟ್ಟಿ ವಹಿಸಿದ್ದರು.ನಂತರ ಯಕ್ಷಗಾನ ಪ್ರದರ್ಶನ ಆರಂಭಗೊಂಡು ಜನಮನ ಸೆಳೆಯಿತು.ಕಾರ್ಯಕ್ರಮದಲ್ಲಿ ಕಲಾ ಆಸಕ್ತರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.