ಬೆಂಗಳೂರು, ಜ 30 ಕುಡಿದ ಮತ್ತಿನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. 45 ವರ್ಷದ ರಾಜೇಂದ್ರ ಬಂಧಿತ ಆರೋಪಿ. ಬುಧವಾರ ಮಧ್ಯರಾತ್ರಿ ಕುಡಿದ ಮತ್ತಿನಲ್ಲಿದ್ದ ಆತ ರಾಜಾಜಿನಗರದ ಮಂಜುನಾಥ್ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ ಐದು ಕಾರುಗಳಿಗೆ ಬೆಂಕಿ ಹಚ್ಚಿದ್ದನು.ಬೆಂಕಿ ಕಾಣಿಸಿಕೊಂಡು ಪರಿಣಾಮ ಸ್ಥಳೀಯರು ಕೂಡಲೇ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೂ, ಬೆಂಕಿಯ ತೀವ್ರತೆಗೆ ಐದು ಕಾರು ಆಹುತಿಯಾಗಿವೆ. ಇದೇ ಸಂದರ್ಭದಲ್ಲಿ ಕಾರು ಮಾಲೀಕನೋರ್ವ ಸಿಸಿಟಿವಿ ಪರಿಶೀಲನೆ ನಡೆಸಿದಾಗ, ಆರೋಪಿಯ ಮುಖ ಚಹರೆ ಸೆರೆಯಾಗಿತ್ತು. ಬೆಂಕಿ ಇಟ್ಟಿದ ಆರೋಪಿ ಸ್ವಲ್ಪ ಸಮಯದ ಬಳಿಕ ಮತ್ತದೇ ಸ್ಥಳಕ್ಕೆ ಬಂದು ಏನಾಗಿದೆ ಎಂದು ಪ್ರಶ್ನಿಸಿದ್ದಾನೆ.ಇದರಿಂದ ಆಕ್ರೋಶಗೊಂಡ ಸ್ಥಳೀಯರು ಆತನಿಗೆ ಗೂಸಾ ನೀಡಿದ್ದಾರೆ. ಸದ್ಯ ಬಸವೇಶ್ವರ ನಗರ ಪೊಲೀಸರು ಆರೋಪಿಯನ್ನು ವಶಕ್ಕೆಪಡೆದು ವಿಚಾರಣೆ ನಡೆಸುತ್ತಿದ್ದಾರೆ.