ಬೆಂಗಳೂರು, ಅ 4 ನಾನು ಅಂತಾರಾಷ್ಟ್ರೀಯ ಖಲಿಸ್ತಾನ್ ಗುಂಪಿಗೆ ಸೇರಿದ ವ್ಯಕ್ತಿ. ನಾನು, ನನ್ನ ಮಗ ಸೇರಿ ಹೈಕೋರ್ಟ್ ಸ್ಫೋಟ ಮಾಡುತ್ತೇವೆ ಎಂದು ಇತ್ತೀಚೆಗೆ ಪತ್ರವೊಂದು ಲಭಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಸೆ.17ರಂದು ಉಚ್ಛ ನ್ಯಾಯಾಲಯವಿರುವ ಹಲವು ಕಡೆಗಳಲ್ಲಿ ಸ್ಫೋಟ ಮಾಡುವ ಕುರಿತು ಬೆದರಿಕೆ ಪತ್ರವೊಂದು ದೆಹಲಿ ಉಚ್ಛ ನ್ಯಾಯಾಲಯಕ್ಕೆ ಬಂದಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರು ಉತ್ತರ ಪ್ರದೇಶದ ಖಾನ್ಪುರ ಮೂಲದ 36 ವರ್ಷದ ರಾಜೇಂದ್ರ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿ ರಾಜೇಂದ್ರ ಸಿಂಗ್ ತನ್ನ ಮಾವನ ಮೇಲಿನ ಕೋಪಕ್ಕೆ ಸ್ಫೋಟದ ಪತ್ರ ಬರೆದಿದ್ದಾಗಿ ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ. ಈತ ಸುಮಿತಾ ಕೌರ್ ಎಂಬಾಕೆಯನ್ನ ಮದುವೆಯಾಗಿದ್ದು, ಆರು ತಿಂಗಳಿಂದ ಇಬ್ಬರ ನಡುವೆ ಗಲಾಟೆಯಾಗಿ ಬೇರೆಯಾಗಿದ್ದರು. ಹೀಗಾಗಿ ಮಾವ ಹರ್ದರ್ಶನ್ ಸಿಂಗ್ ನಾಗಪಾಲ್, ಅಳಿಯ ರಾಜೇಂದ್ರನಿಗೆ ಬೈದಿದ್ದರು. ಪತ್ನಿಯನ್ನು ಮನೆಯಿಂದ ಕರೆದುಕೊಂಡು ಹೋಗಿದ್ದಕ್ಕೆ ರಾಜೇಂದ್ರ ಕೋಪಗೊಂಡಿದ್ದ. ಇದೇ ಕಾರಣಕ್ಕೆ ಆಕ್ರೋಶಗೊಂಡ ಚೆನ್ನೈ ,ಕೊಲ್ಕತ್ತಾ, ಮುಂಬೈ ಹಾಗೂ ಬೆಂಗಳೂರು ಹೈಕೋರ್ಟ್ ರಿಜಿಸ್ಟ್ರಾಗರ್ೆ ಆರೋಪಿ ಒಮ್ಮೆಲೆ ಪತ್ರ ಕಳಿಸಿ ಹೈಕೋರ್ಟ್ ಕಟ್ಟಡ ಸ್ಫೋಟ ಮಾಡೋದಾಗಿ ಬೆದರಿಕೆ ಹಾಕಿದ್ದನು. ಚೆನ್ನೈ ಪೊಲೀಸರು ಆರೋಪಿ ರಾಜೇಂದ್ರನನ್ನು ಬಂಧಿಸಿ, ವಿಚಾರಣೆ ನಡೆಸಿದ್ದರು. ನಂತರ ವಿಧಾನಸೌಧ ಪೊಲೀಸರು ಬಾಡಿ ವಾರೆಂಟ್ ಮೇಲೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.