ಹೋರಾಟಗಾರರ ಬಂಧನ: ಬಿಡುಗಡೆಗೆ ಆಗ್ರಹ

ಹೋರಾಟಗಾರರ ಬಂಧನ: ಬಿಡುಗಡೆಗೆ ಆಗ್ರಹ Arrest of activists: Demand for their release

         ಸಿಂದಗಿ 06; ವಿಜಯಪುರದಲ್ಲಿ ಶಾಂತಿಯುತ  ಪ್ರತಿಭಟನೆ  ಮಾಡುತ್ತಿದ್ದ ವಿಜಯಪುರ ಸರ್ಕಾರಿ ವೈದ್ಯಕೀಯ  ಹೋರಾಟ ಸಮಿತಿಯ ಹೋರಾಟಗಾರರ ಬಂಧನ ಮಾಡಿದ್ದು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ತಹಶೀಲ್ದಾರ ಕರೆಪ್ಪ ಬೆಳ್ಳಿ ಮುಖಾಂತರ ಘನವೆತ್ತ ರಾಷ್ಟಪತಿಗಳು ಹಾಗೂ ಮಾನ್ಯ ಅಧ್ಯಕ್ಷರು ರಾಜ್ಯ ಮಾನವ ಹಕ್ಕುಗಳ ಆಯೋಗ ನವ ದೆಹಲಿ ಇವರಿಗೆ ಮನವಿ ಸಲ್ಲಿಸಿದರು. 

        ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ನಗರದ ಡಾ. ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ಸೆಪ್ಟೆಂಬರ್ 18, 2025 ರಿಂದ ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸರ್ಕಾರದಿಂದ ಉದ್ದೇಶಿಸಿರುವ ಪಿಪಿಪಿ ಮಾದರಿಯ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯನ್ನು ವಿರೋಧಿಸಿ ಸರ್ಕಾರದಿಂದಲೇ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಲು ಆಗ್ರಹಿಸಿ ಅನಿರ್ಧಿಷ್ಟ ಮತ್ತು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ.  ಜನವರಿ 1, 2026ಕ್ಕೆ ಅನಿರ್ಧಿಷ್ಟ ಧರಣಿಯು 106ನೇ ಹಾಗೂ ಅಹೋರಾತ್ರಿ 18 ನೇ ದಿನ ಪೂರೈಸಿದ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಮನೆಯ ಮುಂದೆ ಧರಣಿ ನಡೆಸಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಮನವಿ ಕೊಡುವ ಕಾರ್ಯಕ್ರಮವನ್ನು ಹೋರಾಟಗಾರರು ಹಮ್ಮಿಕೊಂಡಿದ್ದರು.  ಹೋರಾಟಗಾರರು ಮುಂಚಿತವಾಗಿಯೇ ಸಂಬಂಧಿಸಿದ ಆದರ್ಶ ನಗರ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಿದ್ದರು. ಜೊತೆಗೆ ಪತ್ರಿಕಾ ಪ್ರಕಟಣೆ ನೀಡಿ ಹೋರಾಟ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿದ್ದರು.   

               ಬೆಳಿಗ್ಗೆ 10.30 ಗಂಟೆಗೆ ಸೋಲಾಪುರ ರಸ್ತೆಯ ಮುಗಳಖೋಡ ಮಠದ ಹತ್ತಿರ ಹೋರಾಟಗಾರರು ಸೇರಿ ಪ್ರತಿಭಟನೆ ಪ್ರಾರಂಭ ಮಾಡುವ ನಿರ್ಧಾರವಾಗಿತ್ತು. ರಸ್ತೆಯ ಬದಿಯಲ್ಲಿ ಶಾಂತವಾಗಿ ಪ್ರತಿಭಟನೆ  ನಡೆಯುತ್ತಿತ್ತು. ಹೋರಾಟದಲ್ಲಿ ನೂರಾರು ಜನರು ಸೇರಿದ್ದರು. ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಹೋರಾಟಗಾರರನ್ನು ಪ್ರಚೋದಿಸಿದರು. ಆಗ ಸಣ್ಣ ಪುಟ್ಟ ನೂಕಾಟ, ತಳ್ಳಾಟ ಸಂಭವಿಸಿತು. ಇದನ್ನೆ ಬಂಡವಾಳ ಮಾಡಿಕೊಂಡ ಪೊಲೀಸರು  ಪ್ರತಿಭಟನಾಕಾರರನ್ನು ಬಂಧಿಸಲು ಪ್ರಾರಂಭಿಸಿದರು. ಹೋರಾಟಗಾರರನ್ನು ಮೇಲೆ ಮೃಗಗಳಂತೆ ವತಿ9ಸಿದರು. ನಂತರ ಎಲ್ಲ ಹೋರಾಟಗಾರರನ್ನು ಬಂಧಿಸಿ ಕರೆದುಕೊಂಡು ಹೋದರು. ಇದು ನಿಜಕ್ಕೂ ಹೋರಾಟಗಾರರಿಗೆ ಮತ್ತು ವಿಜಯಪುರ ಜಿಲ್ಲೆಯ ಜನತೆಗೆ ಮಾಡಿದ ಅನ್ಯಾಯವಾಗಿದೆ.

             ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ರಾಜಕಾರಣಿಗಳ ಕೈಗೊಂಬೆಯಾಗಿ ವತಿ9ಸುತ್ತಿರುವುದು ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಇಂತಹ ದುಷ್ಟಶಕ್ತಿಗಳಿಗೆ ಕಡಿವಾಣ ಹಾಕಬೇಕಾಗಿದೆ.  ಬಂಧಿಸಿದ 27 ಜನ ಹೋರಾಟಗಾರರ ಮೇಲೆ ಪೊಲೀಸರು ಎಫ್‌.ಐ.ಆರ್ ದಾಖಲಿಸಿದ್ದಾರೆ. ಜಿಲ್ಲೆಯ ಒಳಿತಿಗಾಗಿ ಹೋರಾಟ ಮಾಡುತ್ತಿದ್ದವರಿಗೆ ಜಿಲ್ಲಾಡಳಿತದಿಂದ ಹಾಗೂ ಪೊಲೀಸ್ ಇಲಾಖೆಯಿಂದ ಹೊಸ ವರ್ಷಕ್ಕೆ ದೊರೆತ ಕೊಡುಗೆಯಾಗಿದೆ.  ಇಂತಹ ಕೃತ್ಯಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿವೆ. ಮತ್ತು ಜನಪರ ಹೋರಾಟಗಳನ್ನು ಹತ್ತಿಕ್ಕುವ ಷಡ್ಯಂತ್ರವಾಗಿದೆ. ಇಂತಹ ನಡುವಳಿಕೆಗಳನ್ನು ವಿಜಯಪುರ ಜನತೆ ಸಹಿಸುವುದಿಲ್ಲ. ಸೂಕ್ತ ಸಂದಭ9ದಲ್ಲಿ ಇದಕ್ಕೆ ಉತ್ತರ ನೀಡುತ್ತಾರೆ ಎಚ್ಚರಿಕೆ ನೀಡಿದರು. 

           ಅದೇ ರಾತ್ರಿ 12 ಗಂಟೆಯ ಸುಮಾರಿಗೆ ಶಾಂತಿಯುತ ಪ್ರತಿಭಟನೆ ಮಾಡಲು ನಗರದ ಡಾ. ಬಿ.ಆರ್‌.ಅಂಬೇಡ್ಕರ್ ವೃತ್ತದ ರಸ್ತೆಯ ಪಕ್ಕದಲ್ಲಿ ಹಾಕಿದ್ದ ಟೆಂಟನ್ನು ಏಕಾಏಕಿ ಪೊಲೀಸರು ಬಲದೊಂದಿಗೆ ಕಿತ್ತಿಹಾಕಿದ್ದು ಖಂಡನೀಯವಾಗಿದೆ. ಕೂಡಲೇ ಕರ್ನಾಟಕ ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಯಾದ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಏಕೈಕ ಸದುದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದ ಹೋರಾಟಗಾರರನ್ನು  ಬಿಡುಗಡೆಗೊಳಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ವಿಜಯಪುರ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಹೋರಾಟಗಾರರಿಗೆ ಹಾಗೂ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.  ಜಯಶ್ರೀ ಪವರ್, ಅನಿತಾ ರಾಠೋಡ, ಜಯಶ್ರಿ ಅಮ್ಮಗೋಳ, ತೇಜಸ್ವಿನಿ ಹಳ್ಳದಕೇರಿ, ಮಲ್ಕಪ್ಪ ಹಲಗಿ, ಸಂಶದ್ ಮುಲ್ಲ, ಶೈಲಾ ಸಂಗಮ, ರೇಣುಕಾ ಚವ್ಹಾಣ್ ಇನ್ನಿತರರು ಭಾಗವಹಿಸಿದವರು.