ವಿಧ್ಯಾರ್ಥಿನಿ ಆತ್ಮಹತ್ಯೆಗೆ ಕಾರಣನಾದ ವ್ಯಕ್ತಿ ಬಂಧಿಸಿ, ಶಿಕ್ಷಿಸಿ
ಶಿಗ್ಗಾವಿ 20 : ಪಟ್ಟಣದ ಫರ್ನಿಚರ್ ಅಂಗಡಿಯ ಅನ್ಯಕೋಮಿನ ಮಾಲೀಕನ ಕಿರುಕುಳದಿಂದ ಬೆಳಗಾವಿಯ ಕಾಲೇಜೊಂದರಲ್ಲಿ ಬಿಸಿಎ ಓದುತ್ತಿದ್ದ ತಾಲೂಕಿನ ಚಿಕ್ಕಮಲ್ಲೂರ ಗ್ರಾಮದ ಶಿಲ್ಪಾ ಯರಮಸನಾಳ ಎಂಬ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದಕ್ಕೆ ಕಾರಣನಾದವರ ವಿರುದ್ಧ ದೂರು ದಾಖಲಿಸಿ, ಬಂಧಿಸಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಒತ್ತಾಯಿಸಿದರು. ತಾಲೂಕಿನ ಚಿಕ್ಕಮಲ್ಲೂರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿದ್ಯಾರ್ಥಿನಿ ಶಿಲ್ಪಾ ಶಿಗ್ಗಾವಿಯ ನವೀನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ನವೀನ್ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಮಾಲೀಕ ಸಂಬಳ ನೀಡದ ಕಾರಣದಿಂದ ತಾಯಿಯ ಚಿಕಿತ್ಸೆಗೆ ಹಣವಿಲ್ಲದೆ ಅಂಗಡಿಯಲ್ಲಿ ಕಳವು ಮಾಡಿದ್ದ. ಇದು ಗೊತ್ತಾಗಿ ಮಾಲೀಕನು ನವೀನ್ ಮೊಬೈಲ್ ಕಸಿದುಕೊಂಡಿದ್ದ. ಮೊಬೈಲ್‌ನಲ್ಲಿದ್ದ ಶಿಲ್ಪಾಳ ನಂಬರ್ ತೆಗೆದುಕೊಂಡು ಕರೆ ಮಾಡಿ ಕಿರುಕುಳ ಕೊಡುತ್ತಿದ್ದ. ಅಲ್ಲದೆ, ನವೀನ್ ಹಣ ಕಳವು ಮಾಡಿ ನಿನಗೆ ಕಳಿಸಿದ್ದಾನೆ. ಇದನ್ನು ಬಹಿರಂಗ ಮಾಡ್ತೀನಿ, ನಿಮ್ಮ ತಂದೆ-ತಾಯಿಗೂ ಹೇಳ್ತಿನಿ ಎಂದು ಶಿಲ್ಪಾಗೆ ಕರೆಮಾಡಿ ನಿರಂತರವಾಗಿ ಕಿರುಕುಳ ಕೊಟ್ಟಿದ್ದಾನೆ ಎಂದು ಆರೋಪಿಸಿದರು. ಅಮಾಯಕ ದಲಿತ ಯುವತಿ ಶಿಲ್ಪಾ ಆತ್ಮಹತ್ಯೆಗೆ ಕಾರಣನಾದ ಫರ್ನಿಚರ್ ಅಂಗಡಿ ಮಾಲೀಕನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.