ಶಿಲ್ಪಾ ಸಾವಿಗೆ ಕಾರಣವಾದ ವ್ಯಕ್ತಿ ಬಂಧಿಸಿ ಕಠಿಣ ಶಿಕ್ಷೆ ನೀಡಿ: ಬೊಮ್ಮಾಯಿ
ಶಿಗ್ಗಾವಿ 20 : ತಾಲೂಕಿನ ಚಿಕ್ಕ ಮಲ್ಲೂರು ಗ್ರಾಮದ ಶಿಲ್ಪಾ ಎನ್ನುವ ದಲಿತ ಯುವತಿ ಶಿಲ್ಪಾಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಕಾರಣವಾಗಿರುವ ಅನ್ಯಕೋಮಿನ ಯುವಕನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಹಾಗೂ ಶಿಲ್ಪಾ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್ ಮಾಡಿರುವ ಅವರು ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಹಿಂದೆ ಅನ್ಯ ಕೋಮಿನ ವ್ಯಕ್ತಿಯ ಕಿರುಕುಳವೇ ಕಾರಣ ಎನ್ನುವ ಸತ್ಯ ಹೊರಬಂದಿದೆ. ಉನ್ನತ ಶಿಕ್ಷಣ ಪಡೆದು ಬದುಕಿ ಬಾಳಬೇಕಾಗಿದ್ದ ವಿದ್ಯಾರ್ಥಿನಿ ತನಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಅನ್ಯ ಕೋಮಿನ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಜೀವಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಶಿಲ್ಪಾಳ ಆತ್ಮಹತ್ಯೆಯ ಹಿಂದಿನ ಸತ್ಯ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸರು ಮುಚ್ಚಿಹಾಕುವ ಅಥವಾ ಪ್ರಕರಣದ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಯುವತಿಗೆ ಕಿರುಕಳ ಕೊಟ್ಟು ಅವಳ ಸಾವಿಗೆ ಕಾರಣವಾಗಿರುವ ವ್ಯಕ್ತಿಯನ್ನು ಪೊಲೀಸರು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು. ತನ್ನದಲ್ಲದ ತಪ್ಪಿಗೆ ಜೀವ ಕಳೆದುಕೊಂಡಿರುವ ಯುವತಿಯ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.