ಚಿತ್ರದುರ್ಗ, ಮೇ 8, ಗಣಿ ಪ್ರದೇಶದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಾಧಿತ ಪ್ರದೇಶಗಳಲ್ಲಿ ಪುನರ್ ನಿರ್ಮಾಣ, ಪುನರ್ ವಸತಿ ಕಲ್ಪಿಸಲು ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿಯು 147.23 ಕೋಟಿ ರೂ.ಗಳ ಕ್ರಿಯಾ ಯೋಜನೆ ತಯಾರಿಸಲು ಅನುಮೋದನೆ ನೀಡಿದೆ.ಮೇ 8 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿ ಸಭೆಯಲ್ಲಿ ಅನುಮೋದನೆ ಮಾಡಿದ ಮೊತ್ತಕ್ಕೆ ಕ್ರಿಯಾ ಯೋಜನೆ ತಯಾರಿಸಲು ಒಮ್ಮತದಿಂದ ಅನುಮೋದನೆ ನೀಡಲಾಯಿತು.
ಸಚಿವರು ಮಾತನಾಡಿ, ಸಂಗ್ರಹವಾದ ನಿಧಿಯಲ್ಲಿ ನೇರವಾಗಿ ಗಣಿ ಬಾಧಿತ ಪ್ರದೇಶಕ್ಕೆ ಶೇ 50 ಹಾಗೂ ಪರೋಕ್ಷವಾಗಿ ಗಣಿ ಭಾದಿತ ಪ್ರದೇಶಕ್ಕೆ ಶೇ 50 ರಷ್ಟು ಅನುದಾನ ಹಂಚಿಕೆ ಮಾಡಲು ಸರ್ಕಾರದ ನಿಯಮಾವಳಿಗಳಿದ್ದು ಅದರಂತೆ ಹೊಳಲ್ಕೆರೆ ಹಾಗೂ ಚಿತ್ರದುರ್ಗಕ್ಕೆ ಹೆಚ್ಚು ಅನುದಾನ ನೀಡಲಾಗಿದೆ. ಈ ವೇಳೆ ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿಯವರು ಪರೋಕ್ಷವಾಗಿ ಗಣಿಬಾಧಿತ ಪ್ರದೇಶ ಇದಾಗಿದ್ದು ಪರೋಕ್ಷವಾಗಿ ಶೇ 50 ರಷ್ಟು ನೀಡಿಬೇಕೆಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಒಟ್ಟು ಡಿಎಂಎಪ್ ರಡಿ ಸಂಗ್ರಹವಾದ ನಿಧಿಯಲ್ಲಿ 60;40 ಅನುಪಾತದಡಿ ವೆಚ್ಚ ಮಾಡಬೇಕಾಗಿದ್ದು ಶೇ 60 ರಷ್ಟು ನಿಧಿಯನ್ನು ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣಾ ಕಾಮಗಾರಿಯನ್ನು ಕೈಗೊಳ್ಳಬೇಕು. ಉಳಿದಂತೆ ಇತರೆ ಮೂಲಭೂತ ಸೌಕರ್ಯ, ಸೌಲಭ್ಯ ಕಲ್ಪಿಸಲು ಬಳಕೆ ಮಾಡಲು ಕ್ರಿಯಾ ಯೋಜನೆ ತಯಾರಿಸಲಾಗಿದೆ.
ಅನುದಾನ ಹಂಚಿಕೆ;
ಹೊಳಲ್ಕೆರೆ 5062.17, ಚಿತ್ರದುರ್ಗ 4355.82, ಮೊಳಕಾಲ್ಮುರು 1177.25, ಚಳ್ಳಕೆರೆ 1177.25, ಹಿರಿಯೂರು 1177.25 ಹಾಗೂ ಹೊಸದುರ್ಗ ವಿಧಾನಸಭಾ ಕ್ಷೇತ್ರಕ್ಕೆ 1177.25 ಲಕ್ಷ ರೂ.ಗಳ ಕ್ರಿಯಾ ಯೋಜನೆಯನ್ನು ತಯಾರಿಸಲು ಉದ್ದೇಶಿಸಲಾಗಿದ್ದು ಇದರಲ್ಲಿ ಪರೋಕ್ಷವಾಗಿ ಬಾಧಿತ ಚಿತ್ರದುರ್ಗಕ್ಕೆ 160 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾ ಸಚಿವರು ತಿಳಿಸಿದರು.ನಿಗಧಿತ ಗುರಿಯನ್ವಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕ್ರಿಯಾ ಯೋಜನೆಯನ್ನು ಒಂದು ವಾರದಲ್ಲಿ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಬೇಕು, ಅನುಮೋದಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದ್ದು ವಿಳಂಬ ಮಾಡದೆ ಸಲ್ಲಿಸಲು ಎಲ್ಲಾ ಶಾಸಕರಿಗೆ ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರದ ಆದೇಶದನ್ವಯ ಕೊವಿಡ್-19 ನಿಯಂತ್ರಣಕ್ಕಾಗಿ ಡಿಎಂಎಫ್ ನಿಧಿಯ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಆದೇಶ ನೀಡಿದ್ದು ಶೇ 30 ರಷ್ಟು ಅನುದಾನ 23.55 ಕೋಟಿ ಹಣವನ್ನು ಕೊವಿಡ್‍ಗಾಗಿ ಬಳಕೆ ಮಾಡಿಕೊಳ್ಳಲು ಸಮಿತಿ ನಿರ್ಧರಿಸಿತು. ಈ ಅನುದಾನದಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕೊವಿಡ್ ನಿಯಂತ್ರಣಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿಗೆ ಗಣಿಬಾಧಿತ ಪ್ರದೇಶದ ಸರ್ಕಾರೇತರ ಸದಸ್ಯರನ್ನು ನೇಮಕ ಮಾಡಿದ್ದು ಇದನ್ನು ರದ್ದು ಮಾಡಿ ಹೊಸದಾಗಿ ನಾಮನಿರ್ದೇಶನ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಸಭೆಯಲ್ಲಿ ಸಂಸದ ಎ.ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಗೂಳಿಹಟ್ಟಿ ಡಿ.ಶೇಖರ್, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೊನ್ನಾಂಬ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಲಿಂಗರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.