ಬೆಂಗಳೂರು: ನಟಿ ರನ್ಯಾ ರಾವ್ ಮತ್ತು ಅವರ ತಂದೆ, ಕರ್ನಾಟಕ ಸರ್ಕಾರದ ಡಿಜಿಪಿ ದರ್ಜೆಯ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರ ವಿರುದ್ಧ ಮಾಧ್ಯಮಗಳು ಸುಳ್ಳು ಮತ್ತು ಮಾನಹಾನಿಕರ ವಿಷಯಗಳನ್ನು ಪ್ರಸಾರ ಮಾಡುವುದನ್ನು ಅಥವಾ ಪ್ರಕಟಿಸುವುದನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರನ್ಯಾರನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಿ ತನಿಖೆ ಇತ್ಯಾದಿ ಕಾನೂನು ಪ್ರಕ್ರಿಯೆಗಳು ನಡೆಯುತ್ತಿರುವ ಮಧ್ಯೆ ಹೈಕೋರ್ಟ್ ಈ ಆದೇಶ ನೀಡಿದೆ.
ಮಾರ್ಚ್ 12 ರಂದು, ರನ್ಯಾ ರಾವ್ ಅವರ ತಾಯಿ ಎಚ್ ಪಿ ರೋಹಿಣಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು, ಈ ವೇಳೆ ಜೂನ್ 2 ರವರೆಗೆ ಮಾಧ್ಯಮಗಳು ನಟಿಯ ವಿರುದ್ಧ ಯಾವುದೇ ಹೇಳಿಕೆ ಪ್ರಕಟಿಸುವುದು ಅಥವಾ ಪ್ರಸಾರ ಮಾಡದಂತೆ ನಿರ್ಬಂಧಿಸಿ ಏಕಪಕ್ಷೀಯ ಆದೇಶವನ್ನು ಹೊರಡಿಸಿತು. ನಂತರ ಅವರ ತಂದೆ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಹೈಕೋರ್ಟ್ ಇದೇ ರೀತಿಯ ನಿರ್ದೇಶನ ನೀಡಿದೆ.
ಕೇಂದ್ರ ತನಿಖಾ ಸಂಸ್ಥೆಗಳು ಉನ್ನತ ಮಟ್ಟದ ಪ್ರಕರಣಗಳನ್ನು ನಿರ್ವಹಿಸುವಾಗ, ವಿಶೇಷವಾಗಿ ಮುದ್ರಣ, ಎಲೆಕ್ಟ್ರಾನಿಕ್, ಆಡಿಯೋ ಮತ್ತು ದೃಶ್ಯ ವೇದಿಕೆಗಳಲ್ಲಿ ಮಾಧ್ಯಮ ವರದಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ವಿವರಿಸುವ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ನ್ಯಾಯಾಲಯ ಹೇಳಿ ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ನಿಗದಿಪಡಿಸಿದೆ.