ಜೈನ ಧರ್ಮಿಯರ ಬೇಡಿಕೆಗಳ ಈಡೇರಿಕೆಗೆ ಸರ್ಕಾರದಿಂದ ಸೂಕ್ತ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Appropriate action by the government to fulfill the demands of Jains: Minister Lakshmi Hebbalkar

ಜೈನ ಧರ್ಮಿಯರ ಬೇಡಿಕೆಗಳ ಈಡೇರಿಕೆಗೆ ಸರ್ಕಾರದಿಂದ ಸೂಕ್ತ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ 

ಬೆಳಗಾವಿ 09: ಜೈನ ಧರ್ಮಿಯರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸದಾ ಬದ್ಧವಾಗಿದೆ.  ಸರ್ವ ಧರ್ಮಿಯರನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.  

ಬೆಳಗಾವಿಯ ಬಸ್ತವಾಡ ಗ್ರಾಮದಲ್ಲಿ ಕರ್ನಾಟಕ ಸಮಸ್ತ ಜೈನ ಸಮಾಜದ ವತಿಯಿಂದ ಸೋಮವಾರ ನಡೆದ ಜೈನ ಸಮಾವೇಶದಲ್ಲಿ ಮಾತನಾಡಿದ ಸಚಿವರು, ಭಾರತದ ಸಂವಿಧಾನ ತುಂಬಾ ಶ್ರೇಷ್ಠವಾದದ್ದು, ಇಲ್ಲಿ ಆಚಾರ ವಿಚಾರಗಳಿಗೆ ತುಂಬಾ ಸ್ವಾತಂತ್ರ್ಯವಿದೆ. ಅಲ್ಪ ಸಂಖ್ಯಾತ ಕೋಟಾದಲ್ಲಿ ಜೈನ ಧರ್ಮಿಯರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಜೈನ ಧರ್ಮದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.  

 ಜೈನರ ಅಹಿಂಸಾ ಪರಮೋ ಧರ್ಮಃ ಎನ್ನುವುದು ಇತರ ಧರ್ಮದವರಿಗೂ ಮಾದರಿ. ಸಂಸ್ಕೃತಿಯಲ್ಲಿ ಶ್ರೇಷ್ಠ ಸಂಸ್ಕೃತಿ ಜೈನ ಧರ್ಮ ಸಂಸ್ಕೃತಿ, ಜೈನ ಧರ್ಮಿಯರು ಶಾಂತಿ ಪ್ರಿಯರು ಎಂದರು.  

ಈ ವೇಳೆ  108 ರಾಷ್ಟ್ರಸಂತ ಗುಣಧರನಂದಿ ಮಹಾರಾಜರು,  ದೇವೇಂದ್ರ ಕೀರ್ತಿ ಭಟ್ಟಾರಕರು, ಭಟಾಕಲಂಕ ಭಟ್ಟಾರಕರು, ಸ್ಚಸ್ತಿಶ್ರೀ ಜಿನ್ ಸೇನ ಭಟ್ಟಾರಕರು, ಸ್ವಸ್ತಿಶ್ರೀ ಲಕ್ಷ್ಮೀಸೇನ, ಚಾರುಕೀರ್ತಿ ಭಟ್ಟಾರಕರು, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಡಿ.ಸುಧಾಕರ್, ಶಾಸಕ ಮಹಾಂತೇಶ್ ಕೌಜಲಗಿ, ಫಿರೋಜ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.