ಅಂಬೇಡ್ಕರ್ ನಗರ್, ಉತ್ತರ ಪ್ರದೇಶ, ನ 7: ಸುಪ್ರೀಂ ಕೋರ್ಟ್ ಯಾವುದೇ ಕ್ಷಣದಲ್ಲಿ ಆಯೋಧ್ಯೆ ಭೂಮಿ ವಿವಾದ ಕುರಿತ ತನ್ನ ನಿರ್ಣಾಯಕ ತೀಪು ಪ್ರಕಟಿಸುವ ಸಾಧ್ಯತೆ ಹಿನ್ನಲೆಯಲ್ಲಿ ಯಾವುದೇ ರೀತಿಯ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಲು ಉತ್ತರ ಪ್ರದೇಶ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ತೀಪು ಪ್ರಕಟಗೊಂಡ ನಂತರ ಆಯೋಧ್ಯೆಯತ್ತ ಜನರು ಧಾವಿಸುವುದನ್ನು ನಿರ್ಬಂಧಿಸುವ ಕ್ರಮವಾಗಿ ಅಧಿಕಾರಿಗಳು ಜಿಲ್ಲೆಯ ಎಂಟು ಕಾಲೇಜುಗಳನ್ನು ತಾತ್ಕಾಲಿಕ ಜೈಲುಗಳನ್ನಾಗಿ ಗುರುತಿಸಿದ್ದಾರೆ. ಅಂಬೇಡ್ಕರ್ ನಗರ ಜಿಲ್ಲೆ, ಆಯೋಧ್ಯೆಗೆ ಹೊಂದಿಕೊಂಡಿರುವ ಕಾರಣ ತೀರ್ಪುನ ನಂತರ ಇಲ್ಲಿಂದ ಹೆಚ್ಚಿನ ಜನರು ರಾಮಜನ್ಮಭೂಮಿಯ ಕಡೆಗೆ ಧಾವಿಸುವ ಸಾಧ್ಯತೆ ಹಿನ್ನಲೆಯಲ್ಲಿ, ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ತಾತ್ಕಾಲಿಕ ಜೈಲುಗಳೆಂದು ಗುರುತಿಸಲಾಗಿರುವ ಕಾಲೇಜುಗಳ ಪೈಕಿ ಮೂರು ಅಕ್ಬರ್ ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಉಳಿತ ತಲಾ ಒಂದೊಂದು ಜೈಲು, ತಂಡಾ, ಜಲಾಲ್ ಪುರ್, ಜೈತ್ಪುರ್, ಭಿಟಿ ಹಾಗೂ ಅಲಾಪುರ್ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದೆ. ಈ ನಡುವೆ, ಆಯೋಧ್ಯೆಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ಅಧಿಕಾರಿಗಳು ಅಪರಾಧ ದಂಡ ಸಂಹಿತೆ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಅಧಿಕಾರಿಗಳ ಅನುಮತಿ ಪಡೆದ ನಂತರವೇ ಯಾವುದೇ ಧಾರ್ಮಿಕ ಕಾರ್ಯಕ್ರಮ ನಡೆಸಲು ಸೂಚನೆ ಹೊರಡಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸುವ ಪೋಸ್ಟ್ ಗಳ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ.