ವಿಜಯಪುರ 23: ಕಾರ್ಮಿಕರ ಮೇಲಿನ ಹಲ್ಲೆ ಖಂಡಿಸಿ ಎಮ್ಆರ್ಪಿಎಸ್ ಮತ್ತು ಹುಬ್ಬಳ್ಳಿಯ ವಿವಿಧ ಸಂಘಟನೆಗಳ ಮುಖಂಡರು ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ವಿಜಯಪುರದ ಗಾಂಧಿನಗರದ ಹತ್ತಿರ ಇಟ್ಟಂಗಿ ಭಟ್ಟಿ ನಡೆಸುತ್ತಿರುವ ಖೇಮು ರಾಠೋಡ ಎಂಬ ದುರುಳನು ತನ್ನ ಇಟ್ಟಂಗಿ ಭಟ್ಟಿಯಲ್ಲಿಯಲ್ಲಿ ಕೆಲಸ ಮಾಡುತ್ತಿದ್ದ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ ಮಾದರ ಎಂಬ ಮೂರು ಜನ ಕಾರ್ಮಿಕರು ಕೆಲಸಕ್ಕೆ ಬರಲು ನಿರಾಕರಿಸಿದರು ಎಂಬ ಕ್ಷುಲ್ಲಕ ಕಾರಣಕ್ಕೆ ತನ್ನ ಸಂಬಂಧಿಕರ ಜೊತೆ ಸೇರಿ ಅವರನ್ನು ಮೂರು ದಿನಗಳವರೆಗೆ ಕೋಣೆಯಲ್ಲಿ ಕೂಡಿಹಾಕಿ, ಅವರ ಕಣ್ಣಿಗೆ ಖಾರದಪುಡಿಯನ್ನು ಎರಚಿ, ಮೂವರು ಕಾರ್ಮಿಕರನ್ನು ಕಟ್ಟಿ ಹಾಕಿ ಪೈಪ್ ನಿಂದ ಅಂಗಾಲಿಗೆ, ಸೊಂಟಕ್ಕೆ, ಬೆನ್ನಿನ ಮೇಲೆ ಅತ್ಯಂತ ಬರ್ಬರವಾಗಿ ಥಳಿಸಿ ಹಲ್ಲೆ ಮಾಡಿರುವ ಅಮಾನವೀಯ ಘಟನೆಯನ್ನು ಖಂಡಿಸಿ ಮಾದಿಗ ದಂಡೋರ ಎಮ್ಆರ್ಪಿಎಸ್ (ಒಖಕಖ) ಮತ್ತು ಕರ್ನಾಟಕ ಪರಿಶಿಷ್ಟ ಕುಲಬಾಂಧವರ ಒಕ್ಕೂಟ ಮತ್ತು ಇತರ ವಿವಿಧ ಸಂಘಟನೆಗಳ ಮುಖಂಡರು ಸೇರಿ ಇಂದು ಹುಬ್ಬಳ್ಳಿಯಲ್ಲಿ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಒಖಕಖ ಜಿಲ್ಲಾಧ್ಯಕ್ಷರಾದ ಸತ್ಯನಾರಾಯಣ ಎಂ ಅವರು ರಾಜ್ಯಪಾಲರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ಮಧ್ಯೆ ಪ್ರವೇಶಿಸಿ ಪ್ರಕರಣದ ವಿಚಾರಣೆಯನ್ನು ವಿಶೇಷ ಫಾಸ್ಟ್ ಟ್ರ್ಯಕ್ ಕೋರ್ಟ್ ಮೂಲಕ ನಡೆಸಲು ಆದೇಶಿಸಬೇಕೆಂದು ಮತ್ತು ಹಲ್ಲೆಯ ಕಾರಣ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡಕಾರ್ಮಿಕರಿಗೆ ಉದ್ಯೋಗ ಮತ್ತು ಸೂಕ್ತ ಪರಿಹಾರ ಕಲ್ಪಿಸಿಕೊಡಲು ಸರ್ಕಾರಕ್ಕೆ ಆದೇಶಿಸಬೇಕೆಂದು ಮನವಿ ಮಾಡಿದರು.ನಂತರ ಮಾತನಾಡಿದ ಮಾದಿಗ ದಂಡೋರ ಎಮ್ಆರ್ಪಿಎಸ್ (ಒಖಕಖ) ರಾಜ್ಯ ವಕ್ತಾರರಾದ ಮಂಜುನಾಥ ಕೊಂಡಪಲ್ಲಿ ಅವರು ಈ ಘಟನೆಯ ಬಗ್ಗೆ ಕಾರ್ಮಿಕರ ಪರವಾಗಿ ದೂರು ದಾಖಲಿಸಲು ಹೋದ ಸಂದರ್ಭದಲ್ಲಿ ರಾಜಕೀಯ ಪ್ರಭಾವಕ್ಕೆ ಮಣಿದು ಪೊಲೀಸರು ಸಹ ತಕ್ಷಣ ಪ್ರಕರಣ ದಾಖಲಿಸಿರುವುದಿಲ್ಲ, ಟಿವಿ ಮಾಧ್ಯಮಗಳು ಪ್ರಕರಣದ ವಿಡಿಯೋ ದೃಶ್ಯವನ್ನು ಪ್ರಸಾರ ಮಾಡಿದ ನಂತರ ನಿರ್ಮಾಣವಾದ ಒತ್ತಡದಿಂದಲೇ ಪ್ರಕರಣ ದಾಖಲಿಸುವ ವಿಜಯಪುರ ಪೊಲೀಸರ ನಡೆ ಕಾನೂನು ಸುವ್ಯವಸ್ಥೆಯು ಬಗ್ಗೆ ಅಪನಂಬಿಕೆ ಹುಟ್ಟಿಸುವಂತಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಮತ್ತು ಕೃತ್ಯ ಎಸಗಿರುವ ಖೇಮು ರಾಠೋಡ ಮತ್ತು ಸಂಗಡಿಗರ ಹೆಡೆಮುರಿ ಕಟ್ಟಿ ಗಡಿಪಾರು ಮಾಡಬೇಕು, ಅಲ್ಲದೇ ಬಾಧಿತರ ಕಣ್ಣೀರಿಗೆ ಸರ್ಕಾರ ಸ್ಪಂದಿಸಿ ಅವರಿಗೆ ಉದ್ಯೋಗ ಮತ್ತು ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸೂರ್ಯನಾರಾಯಣ ಕನಮಕ್ಕಲ, ಮೇಘರಾಜ ಹಿರೇಮನಿ, ರಂಗನಾಯಕ ತಪೇಲ, ಗೋವಿಂದ ಬೆಲ್ಡೋಣಿ, ಗುರುಮೂರ್ತಿ ಬೆಂಗಳೂರು, ಪ್ರಕಾಶ ಹುಬ್ಬಳ್ಳಿ, ನರಸಿಂಹ ಎಸ್ ಸಾಂಬ್ರಾಣಿ, ನೂರೊಂದಪ್ಪ ಹೆಗಡೆ, ವೆಂಕಟರಮಣ ತಾಡಪತ್ರಿ, ಶ್ರೀಕಾಂತ ಮದರಕಲ, ಅರುಣ, ರಾಜೇಶ ಸಂಕನಾಳ, ಗುರುನಾಥ ಅತ್ತಿಗುಡ್ಡ, ಮಾದೇವ ದೊಡ್ಡಮನಿ, ದುರ್ಗಪ್ಪ ಪೂಜಾರ, ಮಹಾಂತೇಶ ರಾಣೇಬೆನ್ನೂರ, ಮುತ್ತು ಬಣಕದಿನ್ನಿ, ರಮೇಶ ಮಾದರ ಮುಂತಾದವರು ಭಾಗವಹಿಸಿದ್ದರು.