ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕಾಗಿ ಎಐಎಮ್‌ಎಸ್‌ಎಸ್ ಸಮಿತಿಯಿಂದ ಸಚಿವರಿಗೆ ಮನವಿ

Appeal from AIMSS Committee to Minister for resolution of women's issues

ಬಳ್ಳಾರಿ 06: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್)ಯು ದೇಶದಾದ್ಯಂತ ಮಹಿಳೆಯರ ಹಕ್ಕುಗಳಿಗಾಗಿ, ಮಹಿಳೆಯರ ಘನತೆಯ ಬದುಕಿಗಾಗಿ ಶ್ರಮಿಸುತ್ತಿದೆ. ಮಹಿಳೆಯರ ಜ್ವಲಂತ ಸಮಸ್ಯೆಗಳಾದ ವರದಕ್ಷಿಣೆ, ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳು, ಅಪೌಷ್ಟಿಕತೆ, ಅಭದ್ರತೆ, ಸ್ತ್ರೀ ಭ್ರೂಣ ಹತ್ಯೆ ಹಾಗೂ ಲಿಂಗ ತಾರತಮ್ಯ, ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಸಂಘಟಿಸುತ್ತಿದೆ. ಇದಲ್ಲದೆ ಎಲ್ಲಾ ಸ್ತರದ ಮಹಿಳೆಯರು ಮತ್ತು ಯುವತಿಯರ ನಡುವೆ ಜಾಗೃತಿಯನ್ನು ಮೂಡಿಸುತ್ತಿದೆ. ಹಾಗೆಯೇ ಸ್ವತಂತ್ರ ಭಾರತದ ಕನಸು ಕಂಡಿದ್ದ ನವೋದಯದ ಹರಿಕಾರರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ವಿಚಾರಗಳು ಮತ್ತು ಅವರ ಆಶಯಗಳನ್ನು ಎತ್ತಿ ಹಿಡಿಯುತ್ತಾ ನಿರಂತರವಾಗಿ ವೈವಿಧ್ಯಮಯ ಚಟುವಟಿಕೆಗಳನ್ನು ಸಂಘಟಿಸುತ್ತ ಸಮಾಜದ ಪ್ರಗತಿಗಾಗಿ ಶ್ರಮಿಸುತ್ತಿದೆ. 

ಭಾರತ ಸ್ವತಂತ್ರವಾಗಿ 76 ವರ್ಷಗಳು ಕಳೆದ ಮೇಲೂ ಊಳಿಗಮಾನ್ಯ ಸಂಸ್ಕೃತಿಯ ಪಳೆಯುಳಿಕೆಗಳಿಂದ ಶೈಕ್ಷಣಿಕ, ಸಾಮಾಜಿಕ, ಓದ್ಯೋಗಿಕ ಹಾಗೂ ಕೌಟುಂಬಿಕ ಕ್ಷೇತ್ರಗಳಲ್ಲಿ ಸಮಾನತೆ- ಸ್ವಾತಂತ್ರ್ಯ ಎಂಬುದು ಮರೀಚಿಕೆಯಾಗಿ ಉಳಿದಿದೆ. ಹೆಣ್ಣು ಮಕ್ಕಳ ಸಾಕ್ಷರತೆಯ ಪ್ರಮಾಣ ಕೇವಲ ಶೇ.58 ರಷ್ಟಿದ್ದು ಇನ್ನೂ ಶೇ.42ರಷ್ಟು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅವರ ಉನ್ನತ ವ್ಯಾಸಂಗದ ಸಂಖ್ಯೆ ಶೇಕಡಾ 1ರಷ್ಟು ಎಂದು ನೋಡಿದಾಗ ಕಳವಳವೆನಿಸುತ್ತದೆ. ವಾಸ್ತವದಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳು ಸಮರ​‍್ಕವಾಗಿರದೆ ನಗರಗಳಿಗೆ ಹೋಗುವುದು ಅನಿವಾರ್ಯವಾಗಿದೆ. ಆದರೆ ನಗರಕ್ಕೆ ಬರಲು ಸಮರ​‍್ಕ ಸಾರಿಗೆ ವ್ಯವಸ್ಥೆಯಾಗಲಿ, ಉಳಿಯಲು ವಸತಿ ನಿಲಯಗಳಾಗಲಿ ಅವಶ್ಯವಿರುವಷ್ಟು ಇಲ್ಲದಿರುವ ಕಾರಣ ಹೆಣ್ಣುಮಕ್ಕಳು ವ್ಯಾಸಂಗದಿಂದ ದೂರ ಉಳಿಯುವಂತಾಗಿದೆ. ಅಲ್ಲದೆ ಇರುವ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ, ಉಪನ್ಯಾಸಕರಿಲ್ಲದೆ, ಕಟ್ಟಡಗಳಿಲ್ಲದೆ ಪರದಾಡುವಂತಾಗಿದೆ. ಇಷ್ಟೆಲ್ಲ ಕಷ್ಟ ಕಾರ​‍್ಪಣಯಗಳ ನಡುವೆ ವಿದ್ಯಾಭ್ಯಾಸ ಮುಗಿಸಿ ಸ್ವಾವಲಂಬಿ ಬದುಕು ನಡೆಸಲು ಮುಂದೆ ಬರುವ ಮಹಿಳೆಯರಿಗೆ ಉದ್ಯೋಗದ ಅವಕಾಶಗಳಿಲ್ಲ. ಇಂದಿನ ಬೆಲೆ ಏರಿಕೆಯ ಸಂದರ್ಭದಲ್ಲಿ ಕುಟುಂಬ ನಿರ್ವಹಣೆ ಮಾಡುವುದೂ ತುಂಬಾ ಕಷ್ಟಕರವಾಗಿದೆ. ಹೀಗಾಗಿ ಅವರು ಖಾಸಗಿ ಹಾಗೂ ಅಸಂಘಟಿತ ವಲಯ(ಆಶಾ-ಅಂಗನವಾಡಿ, ಬಿಸಿ ಊಟ ತಯಾರಕರು, ನರೇಗಾ ಯೋಜನೆಯಡಿ ಕೆಲಸ ಮಾಡುವವರು ಇತ್ಯಾದಿ....)ಗಳಲ್ಲಿ  ಅತಿ ಕಡಿಮೆ ಸಂಬಳಕ್ಕಾಗಿ ಹಗಲಿರುಳು ದುಡಿಯುವಂತಾಗಿದೆ.   

ಇತ್ತೀಚಿನ ಹಲವು ವರದಿಗಳನ್ವಯ ಮಹಿಳೆಯರ ಆರೋಗ್ಯದ ಸ್ಥಿತಿ ಶೋಚನೀಯವಾಗಿದೆ. ಅಪೌಷ್ಟಿಕತೆ ಒಂದೆಡೆಯಾದರೆ ಅತಿ ಹೆಚ್ಚು ಮಹಿಳೆಯರು ರಕ್ತ-ಹೀನತೆಯಿಂದ ಬಳಲುತ್ತಿದ್ದಾರೆ. ಜೊತೆಗೆ ಇತೀಚೆಗೆ ರಾಜ್ಯದಾದ್ಯಂತ ಹಲವು  ಜಿಲ್ಲೆಗಳಲ್ಲಿ  ಬಾಣಂತಿ ಮತ್ತು ನವಜಾತ ಶಿಶು ಮರಣದ ಸಂಖ್ಯೆ ಹೆಚ್ಚಾಗುತ್ತಿದ್ದು ದಾವಣಗೆರೆ ಯಲ್ಲಿ 28 ಬಾಣಂತಿಯರು 125 ನವಜಾತ ಶಿಶುಗಳು ಬಳ್ಳಾರಿಯಲ್ಲಿ 5 ಬೆಳಗಾವಿಯಲ್ಲಿ 111 ನವಜಾತ ಶಿಶುಗಳು ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ, ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಈ ಪರಿಸ್ಥಿತಿ ಎದುರಾಗಿದೆ ಇದರ ಬಗ್ಗೆ ಸರ್ಕಾರವು ಸರಿಯಾದ ಕ್ರಮ ತೆಗೆದುಕೊಳ್ಳಬೇಕು, ಆರ್ಥಿಕ ಬಿಕಟ್ಟಿನಿಂದಾಗಿ ಹಸಿವೆಯಿಂದ ಸಂಭವಿಸುತ್ತಿರುವ ಸಾವುಗಳು ನಾಗರೀಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿವೆ. ವಿಧವೆಯರು, ವೃದ್ಧರು ಹಾಗೂ ಅಂಗವಿಕಲರಿಗೆ ದೊರೆಯಬೇಕಾದ ಪಿಂಚಣಿಯ ವಿಳಂಬದಿಂದ ಮತ್ತು ತಾಂತ್ರಿಕ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ಸಿಗದಿರುವುದು ಅವರನ್ನು ಇನ್ನಷ್ಟು ಹೀನಾಯ ಸ್ಥಿತಿಗೆ ತಳ್ಳುತ್ತದೆ. ಅಲ್ಲದೆ ಸಾಂಸ್ಕೃತಿಕ ಅಧ:ಪತನದಿಂದಾಗಿ ಪುಟ್ಟ ಕಂದಮ್ಮಳಿಂದ ಹಿಡಿದು ವಯೋವೃದ್ಧರವರೆಗೂ ನಡೆಯುತ್ತಿರುವ ಲೈಂಗಿಕ ಅಪರಾಧಿಗಳು, ಪ್ರೀತಿಯ ನಿರಾಕರಣೆ ಸಹಿಸದೆ  ಸೇಡಿನ ಮನೋಭಾವದಿಂದ ನಡೆಯುವ ಆಸಿಡ್ ದಾಳಿಗಳು, ಕುಟುಂಬದ ಒಣ ಪ್ರತಿಷ್ಠೆಗೋಸ್ಕರ ನಡೆಯುವ ಮರ್ಯಾದೆಗೇಡು ಹತ್ಯೆಗಳು, ಇನ್ನು ಹಲವೆಡೆ ಉದ್ಯೋಗಸ್ಥ ಮಹಿಳೆಯರಿಗೆ ಉಸಿರುಗಟ್ಟಿಸುವ ವಾತಾವರಣ ಮತ್ತೊಂದೆಡೆ. ಕೌಟುಂಬಿಕ ದೌರ್ಜನ್ಯಗಳನ್ನು ಅನಿವಾರ್ಯವಾಗಿ ಸಹಿಸಬೇಕಾದ ಪರಿಸ್ಥಿತಿ ಉಂಟಾಗಿದೆ.  

ಅಶ್ಲೀಲತೆ-ಕ್ರೌರ್ಯ ತುಂಬಿರುವ ಸಿನಿಮಾ-ಜಾಹೀರಾತುಗಳು, ಪೋರ್ನ್‌ ವೆಬ್ಸೈಟ್ಗಳು, ಸಾಮಾಜಿಕ ಮಾಧ್ಯಮಗಳಲ್ಲಿನ ಶಾರ್ಟ್ಸ್‌-ರೀಲ್ಗಳು, ಮದ್ಯ-ಮಾದಕ ವಸ್ತುಗಳು ಯುವ ಜನತೆಯನ್ನು ದಾರಿ ತಪ್ಪಿಸಿವೆ. ಸಮಾಜದಲ್ಲಿ ಅಪರಾಧಗಳು ಹೆಚ್ಚುವಂತೆ ಪ್ರೇರೇಪಿಸಿವೆ. ಸಾಮಾಜಿಕ ವಾತಾವರಣದಲ್ಲಿ ಮೌಲ್ಯಗಳ ಕುಸಿತವನ್ನು ಕಾಣುತ್ತಿದ್ದೇವೆ. ಇವೆಲ್ಲವೂ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿವೆ. 

ಇಂತಹ  ಗಂಭೀರ ಪರಿಸ್ಥಿತಿಯಲ್ಲಿ ಸರ್ಕಾರವು ತ್ವರಿತಗತಿಯಲ್ಲಿ ಸ್ಪಂದಿಸಬೇಕಾಗಿದೆ. ಇನ್ನೂ ಹಲವು ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕಿದೆ. ಹೀಗಾಗಿ ಮೇಲೆ ಪ್ರಸ್ತಾಪಿಸಿರುವ ಹಲವಾರು ಸಮಸ್ಯೆಗಳ ಕುರಿತು ರಾಜ್ಯದ ಮಹಿಳೆಯರ ಧ್ವನಿಯಾಗಿ  ನಮ್ಮ ಬೇಡಿಕೆಗಳನ್ನು ತಮ್ಮ ಗಮನಕ್ಕೆ ತರುವುದರ ಮೂಲಕ ಪರಿಹಾರವನ್ನು ನೀರೀಕ್ಷಿಸುತ್ತೇವೆ. 

ಈ ಎಲ್ಲಾ ಬೇಡಿಕೆಗಳನ್ನು ಡಿಸಿ ಕಚೇರಿಯ ಗ್ರೇಡ್ ಒನ್ ತಹಶೀಲ್ದಾರರಾದ ಶಶಾವಲಿ ಅವರ ಮೂಲಕ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಬಳ್ಳಾರಿ ಇವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕೆ.ಎಂ. ಈಶ್ವರಿ, ಜಿಲ್ಲಾ ಸಮಿತಿ ಪದಾಧಿಕಾರಿಗಳದ ವಿದ್ಯಾ, ಜೆ.ಸೌಮ್ಯ ಇದ್ದರು.