ವಾಷಿಂಗ್ಟನ್, ಫೆ 13 : ಈ ತಿಂಗಳ ಅಂತ್ಯದಲ್ಲಿ ತಾವು ಹಾಗೂ ತಮ್ಮ ಪತಿ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲು ತೀವ್ರ ಉತ್ಸುಕಳಾಗಿದ್ದೇನೆ ಎಂದು ಹೇಳಿರುವ ಅಮೆರಿಕಾ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್, ತಮ್ಮನ್ನು ಭಾರತಕ್ಕೆ ಆಹ್ವಾನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಭಾರತ ಭೇಟಿಗೆ ಆಹ್ವಾನ ನೀಡಿರುವ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಈ ತಿಂಗಳ ಕೊನೆಯಲ್ಲಿ ಅಹಮದಾಬಾದ್ ಹಾಗೂ ನವದೆಹಲಿಗೆ ಭೇಟಿ ನೀಡಲು ತಾವು ಎದುರು ನೋಡುತ್ತಿರುವುದಾಗಿ, ಈ ಭೇಟಿಗಾಗಿ ಉತ್ಸುಕಳಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಅಮೆರಿಕಾ ಹಾಗೂ ಭಾರತ ನಡುವಣ ನಿಕಟ ಬಾಂಧವ್ಯ ಸಂಭ್ರಮಿಸಲು ಕಾತುರಳಾಗಿದ್ದೇನೆ ಎಂದು ಮೆಲಿನಾ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಅವರು, ಈ ಭೇಟಿ ಬಹಳ ವಿಶೇಷವಾದ್ದು ಎಂದು ಹೇಳಿದ್ದಾರೆ.
ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಟ್ರಂಪ್ ಫೆಬ್ರವರಿ 24 ರಿಂದ ಮೊದಲ ಬಾರಿ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ಫೆ. 24 ರಂದು ಅಧ್ಯಕ್ಷ ಟ್ರಂಪ್, ಪ್ರಧಾನಿ ಮೋದಿ ಅವರೊಂದಿಗೆ ಅಹಮದಾಬಾದ್ ನಲ್ಲಿ ನಡೆಯಲಿರುವ "ಕೆಮ್ ಚೋ ಟ್ರಂಪ್" ಬೃಹತ್ ಜಂಟಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಅಮೆರಿಕಾದ ಹೂಸ್ಟನ್ ನಲ್ಲಿ ಆಯೋಜಿಸಲಾಗಿದ್ದ "ಹೌಡಿ ಮೋದಿ" ಮಾದರಿಯ ಕಾರ್ಯಕ್ರಮ ಇದಾಗಿದೆ.
ಅಹಮದಾಬಾದ್ ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸರ್ದಾರ್ ಪಟೇಲ್ ಕ್ರಿಕೆಟ್ ಮೈದಾನವನ್ನು ಟ್ರಂಪ್ ಉದ್ಘಾಟಿಸಲಿದ್ದಾರೆ. ಈ ಮೈದಾನ ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಮೈದಾನಕ್ಕಿಂತ ದೊಡ್ಡದಾಗಿದ್ದು, ಮೈದಾನದಲ್ಲಿ ಏಕಕಾಲಕ್ಕೆ 1.10 ಲಕ್ಷ ಮಂದಿ ಕುಳಿತುಕೊಳ್ಳಬಹುದಾಗಿದೆ. ಈ ಮೈದಾನದಲ್ಲಿ ಕೆಮ್ ಚೋ ಟ್ರಂಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಕೆಮ್ ಚೋ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ, ಅಮೆರಿಕಾದ ಅಧ್ಯಕ್ಷರು, ಪ್ರಧಾನಿ ಮೋದಿ ಅವರೊಂದಿಗೆ ಅದ್ದೂರಿ ರೋಡ್ ಶೋ ಮೂಲಕ ಸಾಬರಮತಿ ಆಶ್ರಮಕ್ಕೆ ತೆರಳಿ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಲಿದ್ದಾರೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸಬರಮತಿ ಆಶ್ರಮದವರೆಗೆ 10 ಕಿಲೋ ಮೀಟರ್ ದೂರ ನಡೆಯಲಿರುವ ರೋಡ್ ಶೋ ವೇಳೆ ದಾರಿಯ ಇಕ್ಕೆಲಗಳಲ್ಲಿ ಲಕ್ಷಾಂತರ ಮುಂದಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಗೌರವಾನ್ವಿತ ಅತಿಥಿಗಳಿಗೆ ಭಾರತ, ಸದಾ ನೆನಪಿನಲ್ಲಿರುವಂತಥಹ ಅಭೂತ ಪೂರ್ವ ಸ್ವಾಗತ ನೀಡಲಿದೆ. ಈ ಭೇಟಿ ಅತ್ಯಂತ ವಿಶೇಷವಾಗಿದ್ದು, ಭಾರತ - ಅಮೆರಿಕದ ಸ್ನೇಹ ಮತ್ತಷ್ಟು ಬಲಗೊಳ್ಳಲಿದೆ ಎಂದು ಪ್ರಧಾನಿ ಮೋದಿ ಟ್ವೀಟರ್ ಮಾಡಿದ್ದಾರೆ.