ನವದೆಹಲಿ, ಜನವರಿ 30, ಖ್ಯಾತ ಗಾಯಕಿ ಅನುರಾಧಾ ಪೌದ್ವಾಲ್ ಅವರ ಜೈವಿಕ ಪುತ್ರಿ ಎಂದು ಹೇಳಿಕೊಂಡು ಮಹಿಳೆಯೊಬ್ಬಳು ಸಲ್ಲಿಸಿದ್ದ ಅರ್ಜಿ ಸಂಬಂಧ ತಿರುವನಂತಪುರಂನ ಕುಟುಂಬ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ, ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸೂರ್ಯ ಕಾಂತ್ ಅವರ ನೇತೃತ್ವದ ನ್ಯಾಯಪೀಠವು, ಪ್ರಕರಣವನ್ನು ತಿರುವನಂತಪುರನಿಂದ ಮುಂಬೈಗೆ ವರ್ಗಾವಣೆ ಮಾಡುವಂತೆ ಗಾಯಕಿ ಅನುರಾಧಾ ಸಲ್ಲಿಸಿದ್ದ ಮನವಿಯ ಮೇರೆಗೆ ಮಹಿಳೆಗೆ ನೋಟಿಸ್ ನೀಡಿ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ.ನಲವತ್ತೈದು ವರ್ಷದ ಮಹಿಳೆಯೊಬ್ಬರು, ತಾನು ಅನುರಾಧಾ ಅವರ ಪುತ್ರಿ ಎಂದು ಹೇಳಿಕೊಂಡು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ತನಗೆ ಅರ್ಹವಾದ ಬಾಲ್ಯ ಮತ್ತು ಜೀವನವನ್ನು ನಿರಾಕರಿಸಿದ್ದಕ್ಕಾಗಿ ಅನುರಾಧಾ ಅವರು 50 ಕೋಟಿ ರೂ.ಪರಿಹಾರ ನೀಡುವಂತೆ ಕೋರಿದ್ದರು.ತಿರುವನಂತಪುರಂ ಕುಟುಂಬ ನ್ಯಾಯಾಲಯವು ಮಹಿಳೆಯ ಮನವಿಯನ್ನು ಅಂಗೀಕರಿಸಿ, ಅನುರಾಧಾ ಅವರಿಗೆ ಸಮನ್ಸ್ ನೀಡಿತ್ತು. ಅದರ ನಂತರ ಖ್ಯಾತ ಗಾಯಕಿ ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದರು.