ಜ. 28ಕ್ಕೆ ಬೇಡಿಕೆ ಈಡೇರಿಕೆಗಾಗಿ ದಲಿತ ಹಕ್ಕುಗಳ ಸಮಿತಿಯಿಂದ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ

ಬೆಂಗಳೂರು, ಜ.25 ,ಗಂಗಾ ಕಲ್ಯಾಣ ಕೊಳವೆಬಾವಿ ಯೋಜನೆಗೆ 2 ಸಾವಿರ ಕೋಟಿ ಒದಗಿಸುವುದು ವಸತಿ ರಹಿತರಿಗೆ ಮನೆ, ನಿವೇಶನ ಹಂಚಿಕೆ ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ದಲಿತರ ವಿಧಾನಸೌಧ ಚಲೋ ರಾಜ್ಯಮಟ್ಟದ ಬೃಹತ್ ರ್ಯಾಲಿಯನ್ನು ಜನವರಿ 28 ರಂದು ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ದಲಿತ ಹಕ್ಕುಗಳ ಸಮಿತಿ ಆಯೋಜಿಸಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡಿ, ರಾಜ್ಯದಲ್ಲಿ ದಲಿತರ ಬದುಕು ಹೀನಾಯ ಸ್ಥಿತಿಯಲ್ಲಿದ್ದು, ಜಾತಿ, ತಾರತಮ್ಯ, ಅಸ್ಪೃಶ್ಯತೆ, ಅವಮಾನ, ಮರ್ಯಾದಾ ಹತ್ಯೆ, ದೌರ್ಜನ್ಯಗಳಿಂದ ಜರ್ಜರಿತವಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆಗಳು ದಲಿತರು ಸ್ವಾಭಿಮಾನದಿಂದ ಬದುಕುವ ಬಯಕೆಯನ್ನು ಕುಂಠಿತಗೊಳಿಸಿವೆ. ಇದಲ್ಲದೆ ಸಂವಿಧಾನದ ಮೇಲೆ ದಾಳಿ, ಪೌರತ್ವ ತಿದ್ದುಪಡಿ ಕಾಯ್ದೆ, ಮೀಸಲಾತಿ ಪ್ರಶ್ನೆಗಳು ದಲಿತರ ಅಭಿವೃದ್ಧಿಗೆ 

ಮಾರಕವಾಗಿವೆ ಎಂದು ಅವರು ಆರೋಪಿಸಿದರು.ಭೂ ಒಡೆತನ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ 11723 ದಲಿತರಿಗೆ 1ಲಕ್ಷದ 76 ಸಾವಿರದ 560 ಕೋಟಿ ರೂ. ಪ್ರಸ್ತಾವಕ್ಕೆ ಹಣ ಒದಗಿಸಿ ಭೂಮಿ ನೀಡುವುದು, ದಲಿತ ಎಲ್ಲಾ ಅರ್ಜಿದಾರರಿಗೆ ಕೊಳವೆಬಾವಿ ಒದಗಿಸುವುದು, ಸ್ಮಶಾನ ಭೂಮಿ, ವಸತಿಹೀನರಿಗೆ ಮನೆ, ನಿವೇಶನ, ಗುಂಪುಸಾಲ, ಕಿರುಸಾಲ ಯೋಜನೆ ಜಾರಿಗಾಗಿ ಹೆಚ್ಚಿನ ಹಣ ಒದಗಿಸುವುದು, ದೇವದಾಸಿ ಮಹಿಳೆಯರಿಗೆ 5 ಸಾವಿರ ಮಾಸಾಶನ, ದಲಿತ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಧಿಸಿರುವ ಆರ್ಥಿಕ ಮಾನದಂಡ ರದ್ದಗೊಳಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸಿ ಜ.28 ರಂದು ರಾಜ್ಯಮಟ್ಟದ ಬೃಹತ್  ಪ್ರತಿಭಟನೆ  ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.