ಸಜ್ಜೆ, ಜೋಳ, ಸಿರಿಧಾನ್ಯ ಯೋಜನೆಗಳ ವಾರ್ಷಿಕ ಗುಂಪು ಸಮಾವೇಶ

ಸಜ್ಜೆ, ಜೋಳ, ಸಿರಿಧಾನ್ಯ ಯೋಜನೆಗಳ ವಾರ್ಷಿಕ ಗುಂಪು ಸಮಾವೇಶ Annual Group Meeting of Sajje, Jola, and Siridunya Projects

ಲೋಕದರ್ಶನ ವರದಿ 

 ಧಾರವಾಡ 20: ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಸಜ್ಜೆ, ಜೋಳ ಹಾಗೂ ಸಿರಿಧಾನ್ಯಗಳ ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಗಳ ಸಂಯುಕ್ತ ವಾರ್ಷಿಕ ಗುಂಪು ಸಭೆಯನ್ನು ಮೇ 18ರಿಂದ 20ರವರೆಗೆ ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಆಯೋಜಿಸಲಾಗಿತ್ತು. ಐಸಿಎಆರ್, ನವದೆಹಲಿ ಬೆಳೆ ವಿಜ್ಞಾನ ವಿಭಾಗದ ಉಪ ಮಹಾನಿರ್ದೇಶಕ ಡಾ. ಡಿ. ಕೆ. ಯಾದವ ಅವರು ದಿ. 19ರಂದು ಕಾರ್ಯಕ್ರಮವನ್ನು ಉದ್ಘಾಟಿಸಿದರು.  

ಸಿರಿಧಾನ್ಯಗಳ ವಿವಿಧ ಕೇಂದ್ರಗಳಲ್ಲಿ ನಡೆಯುತ್ತಿರುವ ಸಂಶೋಧನಾ ಕಾರ್ಯವನ್ನು ಶ್ಲಾಘಿಸಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಜೊತೆಗೆ, ಸರಿಯಾದ ತಳಿಯ ಬೀಜಗಳು ಸರಿಯಾದ ಸಮಯದಲ್ಲಿ ರೈತರಿಗೆ ಲಭ್ಯವಾಗುವ ವ್ಯವಸ್ಥೆಯ ಕುರಿತು ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಕೃಷಿಶಾಸ್ತ್ರ, ಜೈವಿಕ ಹಾಗೂ ಇತರ ಸಸ್ಯ ಸಂರಕ್ಷಣಾ ಘಟಕಗಳನ್ನು ಬಲಪಡಿಸಿ, ಸಿರಿಧಾನ್ಯಗಳ ವಿಸ್ತೀರ್ಣ, ಉತ್ಪಾದನೆ ಹಾಗೂ ಉತ್ಪಾದಕತೆ ಹೆಚ್ಚಿಸಲು ರೈತರಿಗೆ ಅನುಕೂಲಕರ ಶಿಫಾರಸುಗಳನ್ನು ನೀಡಬೇಕೆಂದು ಹೇಳಿದರು.  

ಸಜ್ಜೆ ಯೋಜನೆಯ ಯೋಜನಾ ಸಂಯೋಜಕ ಡಾ. ಎಸ್‌. ಎನ್‌. ಸಕ್ಸೇನಾ ಹಾಗೂ ಜೋಳ ಮತ್ತು ಸಣ್ಣ ಸಿರಿಧಾನ್ಯಗಳ ಯೋಜನಾ ಸಂಯೋಜಕ ಡಾ. ಆರ್ ಮಧುಸೂಧನ ಅವರು ವಿವಿಧ ಕೇಂದ್ರಗಳಲ್ಲಿ ಕೈಗೊಳ್ಳಲಾದ ಸಂಶೋಧನಾ ಮುಖ್ಯಾಂಶಗಳನ್ನು ಮಂಡಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಡಾ. ಎಸ್‌. ಕೆ. ಪ್ರಧಾನ ಅವರು, ಸಿರಿಧಾನ್ಯಗಳು ಪೌಷ್ಟಿಕ ಧಾನ್ಯಗಳಾಗಿದ್ದರೂ ಅವುಗಳ ಪ್ರಗತಿ ನೀರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂದು ಅಭಿಪ್ರಾಯಪಟ್ಟರು.

“ವಿಕಸಿತ ಭಾರತ” ನಿರ್ಮಾಣದ ಗುರಿ ಸಾಧಿಸಲು ಜೀನೋಟೈಪಿಂಗ್ ಹಾಗೂ ರೈತರ ಪಾಲ್ಗೊಳ್ಳುವಿಕಾಧಾರಿತ ವಿಧಾನಗಳನ್ನು ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ಕರೆ ನೀಡಿದರು. ಸಿರಿಧಾನ್ಯಗಳನ್ನು ಜಾಗತಿಕವಾಗಿ ಉಷ್ಣ, ಅರೆಉಷ್ಣ ಹಾಗೂ ಸಮಶೀತೋಷ್ಣ ವಲಯ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಡಾ. ಸಿ. ತಾರಾ ಸತ್ಯವತಿ, ಅವರು ಸಿರಿಧಾನ್ಯಗಳ ಮಹತ್ವ ಮತ್ತು ಪ್ರಸ್ತುತ ಪರಿಸ್ಥಿತಿಯ ಕುರಿತು ಪ್ರಾಥಮಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.  

ಅಧ್ಯಕ್ಷೀಯ ಭಾಷಣದಲ್ಲಿ ಕೃ.ವಿ.ವಿ., ಧಾರವಾಡದ ಕುಲಪತಿ ಡಾ. ಪಿ. ಎಲ್‌. ಪಾಟೀಲ ಅವರು ಎಲ್ಲಾ ಎಐಸಿಆರ​‍್ಿ ಸಿರಿಧಾನ್ಯ ಕೇಂದ್ರಗಳ ಸಾಧನೆಯನ್ನು ಪ್ರಶಂಸಿಸಿದರು. ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸಜ್ಜೆ, ಜೋಳ ಹಾಗೂ ಸಿರಿಧಾನ್ಯಗಳ ವಿಜ್ಞಾನಿಗಳು ಭಾಗವಹಿಸಿದ್ದರು.  ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಕೃಷಿ ವಿಶ್ವವಿದ್ಯಾಲಯ ಧಾರವಾಡದ ಸಂಶೋಧನಾ ನಿರ್ದೇಶಕರಾದ ಡಾ. ಎ. ಎಸ್‌. ಸಜ್ಜನ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಂದನಾರೆ​‍್ಣಯನ್ನು ಡಾ. ಎನ್‌. ಜಿ. ಹನಮರಟ್ಟಿ ಅವರು ನೆರವೇರಿಸಿದರು.