ನವದೆಹಲಿ, ಫೆ 03 : ರಾಷ್ಟ್ರಪಿತ ಮಹಾತ್ಮ ಗಾಂಧಿ ಸೇರಿದಂತೆ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಬಿಜೆಪಿ ನಾಯಕ ಅನಂತ್ ಕುಮಾರ್ ಹೆಗ್ಡೆ ಅಪಮಾನಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಸ್ಪಷ್ಟನೆ ನೀಡುವಂತೆ ಪ್ರಧಾನಿ ನರೆಂದ್ರ ಮೋದಿ ಅವರನ್ನು ಕಾಂಗ್ರೆಸ್ ಆಗ್ರಹಿಸಿದೆ.
ಈ ಸಂಬಂಧ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಐಸಿಸಿ ಹಿರಿಯ ವಕ್ತಾರ ಆನಂದ್ ಶರ್ಮಾ, ’’ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ವಾತಂತ್ರ್ಯ ಚಳವಳಿಯ ಬಗ್ಗೆ ಬಿಜೆಪಿ ನಾಯಕರು ಇತ್ತೀಚೆಗೆ ನೀಡಿದ ಹೇಳಿಕೆಯ ಬಗ್ಗೆ ನಮಗೆ ಕಳವಳವಿದೆ. ಮಹಾತ್ಮ ಗಾಂಧಿಯವರ 150 ನೇ ವಾರ್ಷಿಕೋತ್ಸವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಗಂಭೀರವಾಗಿದ್ದರೆ, ಅವರು ಸಂಸತ್ತಿಗೆ ಬಂದು ಅನಂತ್‌ಕುಮಾರ್ ಹೆಗ್ಡೆ ಹೇಳಿಕೆ ಕುರಿತುಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
ದೆಹಲಿ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನಾಯಕರು ಸಲ್ಲದ ಹೇಳಿಕೆ ನೀಡುತ್ತ್ತಿದ್ದು, ರಾಷ್ಟ್ರದ ಆತ್ಮವನ್ನು ಘಾಸಿಗೊಳಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
"ಈ ಹಿಂದೆ ದೆಹಲಿ ಚುನಾವಣೆಯಲ್ಲಿ 3 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಬಿಜೆಪಿ ಹತಾಶಗೊಂಡಿದ್ದು, ಈ ಬಾರಿ ಗೆಲುವಿಗೋಸ್ಕರ ಆಳವಾದ ಗಾಯಗಳನ್ನು ಮಾಡುತ್ತಿದ್ದಾರೆ"ಎಂದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿ ಕುರಿತು ನೋಟಿಸ್‌ನಲ್ಲಿ ಮಾತನಾಡಲು ಪ್ರತಿಪಕ್ಷಗಳಿಗೆ ಅವಕಾಶ ನೀಡದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಈ ವಿಷಯದ ಬಗ್ಗೆ ಚರ್ಚೆ ನಡೆಸುವ ಬೇಡಿಕೆಯನ್ನು ಕಾಂಗ್ರೆಸ್ ಮುಂದುವರಿಸುವುದಾಗಿ ಆನಂದ್ ಶರ್ಮಾ ಹೇಳಿದ್ದಾರೆ.