ಅನಂತ ಕುಮಾರ್ ಪುಣ್ಯ ತಿಥಿ: ಮುಖ್ಯಮಂತ್ರಿ ಗೌರವ ನಮನ

 ಬೆಂಗಳೂರು, ನ.12 :           ಬಿಜೆಪಿಯ ಹಿರಿಯ ಮುಖಂಡ, ದಿ. ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪುಣ್ಯ ತಿಥಿ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಗೌರವ ನಮನ ಸಲ್ಲಿಸಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿ, ಸಂಘಟನಾ ಚತುರ, ರಾಜ್ಯ ಮತ್ತು ಕೇಂದ್ರದ ನಡುವೆ ಕೊಂಡಿಯಂತಿದ್ದ, ಅದ್ವಿತೀಯ ನಾಯಕ, ನನ್ನ ಪರಮಾಪ್ತ ಅನಂತ್ ಕುಮಾರ್ ಅವರು, ನಮ್ಮನ್ನಗಲಿದ ದಿನ ನೆನೆದರೆ ಮನಸ್ಸು ಭಾರವಾಗುವುದು. ದೇಶಕ್ಕಾಗಿ ನೀಡಿದ ಸೇವೆಯಿಂದ ಅವರು ಸದಾ ಜೀವಂತ. ಅದಮ್ಯ ಚೇತನ ಅನಂತ್ ಕುಮಾರ್ ಅವರ ಪುಣ್ಯತಿಥಿಯಂದು ನನ್ನ ಭಾವಪೂರ್ಣ ಶ್ರದ್ಧಾಂಜಲಿ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಅನಂತ್ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಹುಬ್ಬಳ್ಳಿಯಲ್ಲಿ ಇಂದು ಹಲವು ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ, ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಕಾಡರ್್ಗಳ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭ ಸ್ವಯಂ ಸೇವಕರು ಮತ್ತು ಅಭಿಮಾನಿಗಳು ರಕ್ತದಾನ ಮಾಡಲಿದ್ದಾರೆ ಎಂದು ದಿವಂಗತ ಅನಂತ್ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ಕುಮಾರ್ ಟ್ವೀಟ್ ಮಾಡಿದ್ದಾರೆ. ಹುಬ್ಬಳ್ಳಿಯ ಗೋಕುಲ ಗಾರ್ಡನ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಸಚಿವ ಜಗದೀಶ್ ಶೆಟ್ಟರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.