ಭರವಸೆಯ ನಾಳೆಗಳ ಹೊತ್ತು ತರುವ ಆನಂದ ಭೋವಿಯವರ ಗಜಲ್

ಗರ್ಭಗುಡಿಯ ಒಳಗೆ ನನ್ನೆಂದು ಬಿಡಲಿಲ್ಲ 

ದೇವರು ಇಂದಿಗೂ ಯಾಕೆಂದು ಕೇಳಲಿಲ್ಲ 

ಕೆಳವರ್ಗದವರ ಶೋಷಣೆ ಕಂಡು ದೇವರೂ ಮೂಕನಾದ ಎಂದು ತನ್ನೊಡಲಾಳದ ನೋವನ್ನು ತೋಡಿಕೊಳ್ಳುವ ಆನಂದ ಭೋವಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಉಗರಗೋಳದವರು. ಪ್ರಸ್ತುತ ನರಗುಂದದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತುಂಬ ವಿರಳವಾಗಿ ಕತೆ ಬರೆಯುವವರಲ್ಲಿ ಆನಂದ ಭೋವಿ ಕೂಡ ಒಬ್ಬರು. ಗ್ರಾಮೀಣ ಪರಿಸರದ ದಟ್ಟ ಅನುಭವಗಳನ್ನು ಹರಳುಗಟ್ಟಿದಂತೆ, ದೇಸೀಭಾಷೆಯಲ್ಲಿ ಹೃದ್ಯವಾಗಿ ಕಟ್ಟಿಕೊಡುವ ಶೈಲಿ ತೀರಾ ಆಪ್ತವೆನಿಸುತ್ತದೆ. ತುಂಬ ಸಂಕೋಚ, ಸರಳ ಸ್ವಭಾವದ ಕತೆಗಾರ ಆನಂದ ಭೋವಿ ಕಥೆ, ಕವಿತೆ, ಕಾದಂಬರಿ, ನಾಟಕ, ಗಜಲ್ ಪ್ರಕಾರಗಳಲ್ಲಿ ಬರವಣಿಗೆ ಮಾಡುತ್ತಿದ್ದಾರೆ. ‘ಮುತ್ತು ಕಟ್ಯಾಳ ನಮ್ಮವ್ವ’ ಎಂಬ ಮೊದಲ ಕಥಾ ಸಂಕಲನದಿಂದ ಬರವಣಿಗೆ ಲೋಕ ಪ್ರವೇಶಿಸಿದರು. ಈ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದ ಕೃತಿಯಾಗಿ ಆಯ್ಕೆಯಾಗಿದ್ದು ಗಮನಾರ್ಹ. ನಂತರ ‘ಹಿಡಿ ಮಣ್ಣಿನ ಬೊಗಸೆ’, ‘ಕೆಂಪು ಹಾಳೆಯ ಹೂವು’ ಎಂಬ ಕಥಾ ಸಂಕಲನಗಳು ಪ್ರಕಟವಾದವು. ‘ಸುಮ್ಮನಿರದ ಗಜಲ್‌’, ‘ದೀಪ ಆರುವ ಹೊತ್ತು’ ಇವರ ಪ್ರಕಟಿತ ಗಜಲ್ ಸಂಕಲನಗಳು. ‘ಮಾತಂಗಿ’ ಎಂಬ ಕಾದಂಬರಿಯನ್ನು ಪ್ರಕಟಿಸಿ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಇವರ ಅನೇಕ ಕಥೆ, ಕವಿತೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವು ಕತೆಗಳು ಬಹುಮಾನ ಪಡೆದಿರುವುದಲ್ಲದೆ ಜನರ ಮೆಚ್ಚುಗೆಯನ್ನು ಗಳಿಸಿವೆ. ಸವದತ್ತಿಯ ರಂಗ ಆರಾಧನಾ ತಂಡದಿಂದ ಇವರ ‘ಬಿಳುಪಿನ ಹೆಣ’, ‘ಕಲ್ಲೂರು ವಾಡೆದಾಗ’, ‘ಮಣ್ಣು’ ಮತ್ತು ‘ಬೀರವ್ವನ ಬಾಳೆಹಣ್ಣು’ ಕತೆಗಳು ನಾಟಕಗಳಾಗಿ ನಾಡಿನ ತುಂಬ ಪ್ರದರ್ಶನಗೊಂಡಿವೆ. ಇವರ ಸಾಹಿತ್ಯ ಕೃಷಿಯನ್ನು ಮೆಚ್ಚಿ ಅನೇಕ ಗೌರವ ಸನ್ಮಾನಗಳು ಒಲಿದು ಬಂದಿವೆ. ‘ಬೇಂದ್ರೆ ಗ್ರಂಥ ಬಹುಮಾನ, ಅಜಾತಶ್ರೀ ಪ್ರಶಸ್ತಿ, ದಸಾಪದಿಂದ ಗಜಲ್ ಕಾವ್ಯ ಪ್ರಶಸ್ತಿ ಪ್ರಮುಖವಾದವು. ಆನಂದ ಭೋವಿಯವರು ಬರೆದಿರುವ ಗಜಲ್ ಒಂದರ ಓದು ಮತ್ತು ಅದರ ಅಂತರಾಳ ಗಮನಿಸೋಣ. 

          ಗಜಲ್ 

ಕಲ್ಲು ಮುಳ್ಳುಗಳ ನಡುವೆ ಅರಳಿದ ಹೂವಿನಂತೆ ಇದ್ದುಬಿಡು 

ನೋವು ನಲಿವುಗಳ ಜೊತೆ ಬದುಕು ಸಾಗಿದಂತೆ ಇದ್ದುಬಿಡು 


ಇಲ್ಲಿ ಎಲ್ಲರೂ ಸ್ವಾರ್ಥಿಗಳೆ ಮುಖವಾಡಗಳ ಧರಿಸಿದ್ದಾರೆ 

ಏರು ಇಳಿಜಾರು ದಾರಿಯಲ್ಲಿ ಹೆಜ್ಜೆಗಳು ಜಾರದಂತೆ ಇದ್ದುಬಿಡು 


ಕಷ್ಟಗಳಿಗೆ ನೂರಾರು ಕಾರಣಗಳು ಹುಡುಕುತ್ತಲೇ ಇರಬೇಕಷ್ಟೆ 

ಸ್ಪಷ್ಟ ಅಸ್ಪಷ್ಟ ಬಿಂಬಗಳು ನೋಡಿಯೂ ನೋಡದಂತೆ ಇದ್ದುಬಿಡು 


ಸುಟ್ಟು ಬೆಂದ ಇದ್ದಿಲು ಕಪ್ಪಗಾದಷ್ಟು ಸುಡುವ ಕೆಂಡದಂತೆ 

ಕಾಯ್ದು ಆರುವ ಕನಸುಗಳು ಹಿಡಿಯಷ್ಟು ಸೋಲದಂತೆ ಇದ್ದುಬಿಡು 


ಭರವಸೆಯ ನಾಳೆಗಳು ಆ ಕಿರಣಗಳ ಹೊತ್ತು ತರುತ್ತವೆ ನೀರೀಕ್ಷೆಯಿರಲಿ 

‘ಆನಂದ’ ರಾಜಿಯಾಗು ದುಃಖದ ಕೂಡ ಮಳೆ ಸುರಿದಂತೆ ಇದ್ದುಬಿಡು 


                                                          - ಆನಂದ ಭೋವಿ 

 

ಬದುಕು ಅನೀರೀಕ್ಷಿತ ತಿರುವುಗಳ ಸಂತೆ. ನಾಳೆ ಏನಾಗುವುದು ಎಂಬ ಊಹೆ ಕೂಡ ಮಾಡಲಾಗುವುದಿಲ್ಲ. ನಿಗೂಢ, ಅಚ್ಚರಿಗಳ ಅನಾವರಣವನ್ನು ಈ ಬದುಕು ದಿನನಿತ್ಯವೂ ಮಾಡುತ್ತಲೇ ಇರುತ್ತದೆ.  ಬದುಕಿನ ದಾರಿಯಲಿ ಎಲ್ಲವೂ ನಾವು ಅಂದುಕೊಂಡ ಹಾಗೆ ನಡೆಯುವುದಿಲ್ಲ. ಒಮ್ಮೆ ಹೂವಿನ ರಾಶಿ ನಮ್ಮನ್ನು ಸ್ವಾಗತಿಸಿದರೆ, ಮಗದೊಮ್ಮೆ ಮುಳ್ಳುಗಳು ಬರಮಾಡಿಕೊಳ್ಳುತ್ತವೆ. ಒಮ್ಮೆ ನಗುವಿನ ಹಾಯಿದೋಣಿ ಹಗುರವಾಗಿ ತೇಲಿಸಿದರೆ, ಮಗದೊಮ್ಮೆ ಅಳುವಿನ ಬಿರುಗಾಳಿ ರೊಯ್ಯನೆ ಹಾರಿಸಿಕೊಂಡು ಹೋಗಿ ಕೆಳಕ್ಕೆ ಕೆಡವಿ ಗಹಗಹಿಸುತ್ತದೆ. ಗೆಲುವು ಪದತಲದಲ್ಲಿ ಅಂಬರವನ್ನೇ ತಂದಿಟ್ಟರೂ, ಸೋಲು ಕಾಲ ಕೆಳಗಿನ ನೆಲಕ್ಕೆ ಕರೆದೊಯ್ಯುತ್ತದೆ. ಇದಕ್ಕೆಲ್ಲ ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ? ಸೋತಾಗ ಬದುಕನ್ನು ತೆಗಳುತ್ತೇವೆ, ಶಪಿಸುತ್ತೇವೆ, ಹಣೆಬರಹವನ್ನು ಹಳಿದುಕೊಳ್ಳುತ್ತೇವೆ. ಗೆದ್ದಾಗ ಬೀಗುತ್ತೇವೆ, ಗೆಲುವಿಗೆ ಮೆಟ್ಟಿಲಾದವರನ್ನು ಮರೆಯುತ್ತೇವೆ, ಗೆಲುವೇ ಸಿಗಲಿ ಎಂದು ಕೋರುತ್ತೇವೆ. ನಮ್ಮೆಲ್ಲ ಕೋರಿಕೆಗಳಿಗೂ ಮೇಲಿನವ ಅಷ್ಟು ಸುಲಭವಾಗಿ ಅಸ್ತು ಅಂದುಬಿಡುವುದಿಲ್ಲ. ಬದುಕು ನಾವಂದುಕೊಂಡ ಹಾಗೆಯೇ ಸುಸೂತ್ರವಾಗಿ ನಡೆದಿದ್ದರೆ ಮೇಲಿನವನ ಜರೂರತ್ತು ನಮಗಿರುತ್ತಿರಲಿಲ್ಲ ಅಲ್ಲವೆ? ಇಲ್ಲ, ಹಾಗುವುದಿಲ್ಲವೆಂದೇ ನಾವು ಒಮ್ಮೆ ನಗುವಿನ ಮಡಿಲಿಗೆ ಬಿದ್ದು ನಿರಾಳವಾಗುತ್ತೇವೆ. ಮರುಕ್ಷಣ ದುಃಖದ ತೆಕ್ಕೆಗಳಿಂದ ಕವುಚಿಕೊಂಡು ಕೆನ್ನೆ ತೋಯಿಸಿಕೊಳ್ಳುತ್ತೇವೆ. ಯಾವುದೂ ಶಾಶ್ವತವಲ್ಲವೆಂಬ ಕಹಿಸತ್ಯವನ್ನು ಮರೆಯುತ್ತೇವೆ. ಆನಂದ ಭೋವಿಯವರ ಗಜಲ್ ಕೂಡ ಇದೇ ಸತ್ಯವನ್ನು ತೋರಿಸುತ್ತದೆ. ಎಲ್ಲವನ್ನೂ ಎದುರಿಸಿ ಬಾಳುವುದೇ ಬದುಕಿನ ಗುಟ್ಟು ಎಂಬುದನ್ನು ಸ್ಪಷ್ಟಪಡಿಸುತ್ತದೆ. 

ನಡೆವ ದಾರಿಯಲ್ಲಿ ಕಲ್ಲು ಮುಳ್ಳುಗಳು ಇದಿರಾಗುವುದು ಸಹಜ ಹಾಗೆಂದು ಕುಸಿದು ಕೂರದೆ ನಗುವ ಹೂವಿನ ತರಹ ಎಲ್ಲವನ್ನೂ ತಾಳಿಕೊಂಡು ಮುಂದೆ ಸಾಗುತ್ತಿರಬೇಕು. ನೋವು-ನಲಿವುಗಳು ಜೊತೆ ಜೊತೆಯಾಗಿಯೇ ಬರುವ ಬದುಕಿನ ಮಿತ್ರರು. ಅವುಗಳ ಜೊತೆ ಹೊಂದಿಕೊಂಡು ಇರುವುದೇ ಬುದ್ಧಿವಂತರ ಲಕ್ಷಣ. ಹೆಜ್ಜೆ ಹೆಜ್ಜೆಗೂ ಸ್ವಾರ್ಥಿಗಳೇ ಇದಿರಾಗುತ್ತಾರೆ ಇಲ್ಲಿ. ತರಹೇವಾರಿ ಮುಖವಾಡಗಳ ಧರಿಸಿಕೊಂಡು ಹಾದಿ ತಪ್ಪಿಸುವ ಹುನ್ನಾರಗಳನ್ನು ಹರಡಿ ನಿಲ್ಲುತ್ತಾರೆ. ಅವುಗಳನ್ನು ಅರಿತು ಬಾಳಿನ ದೋಣಿ ಮುಗುಚಿ ಬೀಳದಂತೆ ದಡ ಸೇರಿಸಬೇಕು. ನಮಗೆ ಬಂದ ಕಷ್ಟಗಳಿಗೆ ಕಾರಣಗಳನ್ನು ಹುಡುಕುತ್ತಾ ಕೂತರೆ ಹೇಗೆ? ಅವುಗಳನ್ನು ತಂದೊಡ್ಡಿದ ಬಿಂಬಗಳು ಸ್ಪಷ್ಟವಾಗಿ, ಅಸ್ಪಷ್ಟವಾಗಿ ಗೋಚರಿಸಿದರೂ ನೋಡಿಯೂ ನೋಡದವನಂತೆ ಮುಂದೆ ಸಾಗಿಬಿಡು. ಕಷ್ಟಗಳನ್ನು ನುಂಗಿದಷ್ಟೂ ಗಟ್ಟಿಯಾಗುತ್ತದೆ ಮನಸು. ಕಾಣುವ ಕನಸುಗಳು ಎಂದಿಗೂ ಸೋತು ಹೋಗದಂತೆ ಬಾಚಿ ತಬ್ಬಿಕೊಂಡಿರು. ನಾಳೆ ಎಂಬುದು ಯಾವತ್ತಿಗೂ ಬದುಕಿಗೆ ಭರವಸೆಯನ್ನೇ ತುಂಬಿಕೊಂಡು ಬರುತ್ತದೆ. ದುಃಖದ ಜೊತೆ ಸಂಧಾನ ಮಾಡಿಕೊಂಡು ಕೆನ್ನೆ ಮೇಲಿಳಿವ ಹನಿಗಳನ್ನು ಮಳೆಯ ಜೊತೆ ಸೇರಿಸಿಬಿಡು. ಇದು ಆನಂದ ಭೋವಿಯವರು ತಮಗೆ ತಾವೇ ಸಂತೈಸಿಕೊಳ್ಳುವುದರ ಜೊತೆಗೆ ನೊಂದವರಿಗೂ ದಾಟಿಸುವ ಆತ್ಮವಿಶ್ವಾಸದ ಸಾಲುಗಳು.  

ನಿರಾಶರಲ್ಲಿ ಆಸೆಯ ಕುಡಿಯೊಂದನ್ನು ಚಿಗುರಿಸಿ, ಸತತ ಸೋಲುವ ಹೆಜ್ಜೆಗಳಿಗೂ ಗೆಲುವಿನ ರುಚಿ ಹತ್ತಿಸಿ, ಕಮ್ಮನೆಯ ಕಣ್ಣುಗಳೊಳಗೆ ಹೊಂಗನಸನ್ನು ತೇಲಿಸಿ ಬದುಕಿನಲ್ಲಿ ಮುನ್ನುಗ್ಗುವ ಛಲವನ್ನು ಹಬ್ಬಿಸುವ ಆನಂದ ಭೋವಿಯವರ ಈ ಗಜಲ್ ಕಾಡುತ್ತದೆ. ಕವಿಯ ಬದುಕಿನ ಒಲುಮೆಗೆ ನಮನಗಳು. 

- * * * -