ಗ್ರಾಮ ಜಗತ್ತಿನ ತಲ್ಲಣಗಳ ಅನಾವರಣ

ಪ್ರಸ್ತುತ ಸಾಹಿತ್ಯಲೋಕದಲ್ಲಿ ತುಂಬಾ ಸದ್ದು ಮಾಡುತ್ತಿರುವ, ವಿಮರ್ಶಕರ ಗಮನ ಸೆಳೆದಿರುವ, ಓದುಗ ಬಳಗವನ್ನು ಹೆಚ್ಚಿಸಿಕೊಂಡಿರುವ ಕತಾ ಸಂಕಲನ ‘ದೀಡೆಕರೆ ಜಮೀನು’. ಕತೆಗಳನ್ನು ಬರೆಯುವುದೆಂದರೆ ಒಲೆಯಿಂದ ಅದೇ ಆಗ ತೆಗೆದ ರೊಟ್ಟಿಯನ್ನು ಖಾರ, ಬೆಣ್ಣೆಯೊಂದಿಗೆ ಸೇರಿಸಿ ಮಾಡಿದ ಅವ್ವನ ಬಿಸಿ ಮುಟಿಗೆ ತಿಂದು ನಾಲಿಗೆ ಚಪ್ಪರಿಸಿಕೊಳ್ಳುವಂತಹ ಖುಷಿ ಎಂದೆನ್ನುವ ಮಲ್ಲಿಕಾರ್ಜುನ ಶೆಲ್ಲಿಕೇರಿ ತಮ್ಮ ಮೊದಲ ಕತಾ ಸಂಕಲನ ‘ದೀಡೆಕರೆ ಜಮೀನು’ ಪ್ರಕಟಿಸಿದ್ದಾರೆ. ಉತ್ತರ ಕಾರ್ನಾಟಕದ ಭಾಷೆ, ಸಂಸ್ಕೃತಿಯನ್ನು ಪರಿಚಯಿಸುವ ಸಂಕಲನದ ಕತೆಗಳು ಶ್ರೀಮಂತ ಜೀವನಾನುಭವದಿಂದ ಹೆಣೆದವುಗಳಾಗಿವೆ. ಸರಳ ನಿರೂಪಣೆ, ಸ್ಥಳೀಯ ಭಾಷೆಯ ಹೃದ್ಯ ಸಂಗಮದ ಮೂಲಕ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿವೆ. ಸಂಕಲನಕ್ಕೆ ಮೊದಲ ಮಾತುಗಳನ್ನಾಡುವ ಹಿರಿಯ ಕತೆಗಾರ ಬಾಳಾಸಾಹೇಬ ಲೋಕಾಪೂರ ಹೇಳುವಂತೆ ಲೇಖಕರ ಒಳಗೊಬ್ಬ ಜೀವಮಿಡಿತದ ಅನಾಹತಕ್ಕೆ ಸ್ಪಂದಿಸುವ ಅಪ್ಪಟ ಮನುಷ್ಯನಿದ್ದಾನೆ. ಈ ಕಾರಣಕ್ಕಾಗಿಯೇ ಇವರ ಕತೆಗಳಲ್ಲಿ ಕೇಡನ್ನು ಬಯಸುವ ಜನರ ಎದುರಿಗೆ ಒಳಿತಿಗೆ ಹಾತೊರೆಯುವ ಜೀವಿಗಳಿವೆ. ಸಂಕಲನದ ಎಂಟೂ ಕತೆಗಳಲ್ಲಿ ಇದಕ್ಕೆ ಸಾಕಷ್ಟು ನಿದರ್ಶನಗಳು ದೊರೆಯುತ್ತವೆ. 

ಸಂಕಲನದ ಮೊದಲ ಕತೆ ‘ಆಲದ ಮರ’ ಗ್ರಾಮಜಗತ್ತಿನ ಅನಾರೋಗ್ಯಕರ ಮನಸ್ಥಿತಿಯನ್ನು ಅಭಿವ್ಯಕ್ತಿಸುತ್ತದೆ. ರುದ್ರಾಪುರದ ಅಗಸಿಬಾಗಿಲ ಮುಂದಿರುವ ಆಲದ ಮರವನ್ನು ಕಡಿದು ಅಲ್ಲಿ ಮಂಗಲ ಭವನ ಕಟ್ಟಿಸುವುದಕ್ಕಾಗಿ ಊರಲ್ಲಿ ಪಂಚಾಯಿತಿ ನಡೆಯುತ್ತದೆ. ಊರಿನ ಸ್ವಾತಂತ್ರ್ಯ ಯೋಧ ಪರ​‍್ಪಜ್ಜ ಊರಿನ ಜನಕ್ಕೆ ನೆರಳು, ಆಸರೆ ನೀಡಿದ್ದ, ಸ್ವಾತಂತ್ರ್ಯ ಹೋರಾಟದಲ್ಲಿ ಜೀವ ಉಳಿಸಿಕೊಳ್ಳಲು ಕಾರಣವಾಗಿದ್ದ ಆ ಮರವನ್ನು ಕಡಿಯುವುದು ಬೇಡ, ಬೇರೆ ಜಾಗವನ್ನು ಬಳಸಿ ಭವನ ಕಟ್ಟಲಿ ಎಂದು ತಿಳಿ ಹೇಳಿದರೆ ಪರ​‍್ಪಜ್ಜನನ್ನು ವಿರೋಧಿಸುತ್ತಿದ್ದ ಪಂಚಾಯಿತಿ ಚೇರ್‌ಮನ್ ಪಂಚಾಕ್ಷರಿ ಶತಾಯಗತಾಯ ಅದನ್ನು ಕಡಿದೇ ತೀರುತ್ತೇನೆ ಎಂದು ಜಿದ್ದಿಗೇ ಬೀಳುತ್ತಾನೆ. ಗಿಡ ಕಡಿಯುವ ಠರಾವು ಪಾಸಾಗುತ್ತದೆ. ಪರ​‍್ಪಜ್ಜನನ್ನು ಬೆಂಬಲಿಸುವ ವಿಶ್ವನಾಥ, ಗಿಡ ಕಡಿಯದಂತೆ ಕೋರ್ಟಿನಿಂದ ತಡೆಯಾಜ್ಞೆ ತರುವಷ್ಟರಲ್ಲಿ ಗಾಂಧಿವಾದಿಯಂತೆ ಪರ​‍್ಪಜ್ಜ ಆ ಮರದ ಕೆಳಗೆ ಉಸಿರು ಚೆಲ್ಲಿರುತ್ತಾನೆ. ಕೆಡುಕೇ ವಿಜೃಂಭಿಸಿ ಒಳಿತಿಗೆ ಸಂಚಕಾರ ತರುವ ಈ ಸಂಗತಿ ಓದುಗರನ್ನು ಕಾಡುತ್ತದೆ. ‘ಭಜಿ ಅಂಗಡಿ ಮಲ್ಲಕ್ಕ’ ಕತೆಯಲ್ಲಿ ದಿಟ್ಟ ಹೆಣ್ಣುಮಗಳೊಬ್ಬಳು ಊರಿನ ಕಾಮುಕನ ಕಾಕದೃಷ್ಟಿಗೆ ಸಿಲುಕಿ, ಏನೆಲ್ಲಾ ಸಂಕಟಗಳನ್ನು ಎದುರಿಸಿ ಧೈರ್ಯದಿಂದ ಬದುಕು ನಡೆಸುವ ಪರಿ ಅಭಿವ್ಯಕ್ತವಾಗಿದೆ. ಗಂಡ ಸತ್ತ ನಂತರ ಒಬ್ಬಂಟಿಯಾಗಿ ಬೆನ್ನಿಗೆ ಮಗುವನ್ನು ಕಟ್ಟಿಕೊಂಡು ಚಹಾದಂಗಡಿ ತೆಗೆದು ಭಜಿ ಮಾರುತ್ತಾ ಚಂದದ ಬದುಕು ಕಟ್ಟಿಕೊಳ್ಳುವ ಮಲ್ಲಕ್ಕ, ತನ್ನ ಅಂಗಡಿ, ಮೂಲಿಮನಿ ಸಂಗಪ್ಪನ ಕಾರಣಕ್ಕೆ ಬೆಂಕಿಗೆ ಆಹುತಿಯಾಗುವುದರಿಂದ ಮರುಗುತ್ತಾಳೆ. ಈಗಾಗಲೇ ಆತನಿಂದ ಸಾಕಷ್ಟು ಚಿತ್ರಹಿಂಸೆ ಅನುಭವಿಸಿ ನೊಂದಿರುವ ಆಕೆಗೆ ಕೊನೆಯಲ್ಲಿ ಆತ ಕೊಲೆ ಕೇಸಿನಲ್ಲಿ ಬಂಧನವಾದಾಗ ದೇವರ ಕರುಣೆ ತನ್ನ ಮೇಲಿದೆ ಎಂದು ನಿಟ್ಟುಸಿರು ಬಿಡುತ್ತಾಳೆ. 

‘ದಿವ್ಯ  ಮೌನದ ಸಂತ’ ಕತೆಯಲ್ಲಿ ಎಲ್ಲಿಂದಲೋ ಬಂದು ಊರಿನ ಗುಡ್ಡದಲ್ಲಿ ನೆಲೆಸುವ ಸಂತನೊಬ್ಬ ಊರಿನ ಕಷ್ಟಕ್ಕೆ ಸ್ಪಂದಿಸಿ ಹದಗೆಟ್ಟಿದ್ದ ರಸ್ತೆಗೆ ಜೀವ ಕೊಡುವ ಅಂತಃಕರಣ ತುಂಬಿಕೊಂಡಿದೆ. ಸಾಕಷ್ಟು ರೋಚಕತೆ, ನಿಗೂಢತನದಿಂದ ಹಿಡಿದಿಟ್ಟುಕೊಳ್ಳುವ ಈ ಕತೆಯಲ್ಲಿಯೂ ನ್ಯಾಯ ಸತ್ತು ಅನ್ಯಾಯವೇ ಮೆರೆದಿರುವದು ವಿಷಾದವೆನಿಸುತ್ತದೆ. ಊರಿಗೆ ಒಳಿತು ಮಾಡಲೆತ್ನಿಸುವ ಸಂತನ ಮೇಲೆಯೇ ಅತ್ಯಾಚಾರದ ಆರೋಪ ಹೊರಿಸಿ ಕೊಲೆ ಮಾಡಲಾಗುತ್ತದೆ. ಸಾಯುವ ಸಂದರ್ಭದಲ್ಲಿಯೂ ಸಂತ ಸತ್ಯ ನುಂಗಿಕೊಂಡು ಮೌನವಾಗಿ ಕಣ್ಮುಚ್ಚುವುದು ವಾಸ್ತವತೆಯ ಕ್ರೂರತನ ವ್ಯಂಗ್ಯಕ್ಕೆ ಸಾಕ್ಷಿಯಾಗುತ್ತದೆ. ‘ತಲ್ಲಣ’ದ ಕತೆ ಕರೋನಾ ಕಾಲದ ಮನಕಲಕುವ ಸತ್ಯವನ್ನು ತೆರೆದಿಡುತ್ತದೆ. ಅಣೆಕಟ್ಟಿನ ನಿರ್ಮಾಣದಿಂದ ಉಂಟಾಗುವ ಹಿನ್ನೀರಿನ ಪರಿಣಾಮ ಗ್ರಾಮಸ್ಥರ ಬದುಕು ದುಸ್ತರವಾಗುವುದು, ಅದನ್ನೇ ಬಂಡವಾಳವಾಗಿಟ್ಟುಕೊಂಡು ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಸದ್ಯದ ರಾಜಕಾರಣದ ಮೇಲೆ ಬೆಳಕು ಚೆಲ್ಲುವ ‘ಮಹಾಪೂರ’ ಕತೆ, ‘ದೀಡೆಕರೆ ಜಮೀನು’ ಕತೆಯಲ್ಲಿ ಬರುವ ಮಾದೇವನೆಂಬ ರೈತನ ಪ್ರಾಮಾಣಿಕತೆ, ಶ್ರದ್ಧೆ, ಸರಳ ಜೀವನ ಕಣ್ಣು ತೆರೆಸುತ್ತದೆ. ತನ್ನದಲ್ಲದರ ಬಗ್ಗೆ ಆಸೆಪಡದೆ ಸಿಕ್ಕಷ್ಟರಲ್ಲಿಯೇ ಸಂತೃಪ್ತ ಜೀವನ ನಡೆಸಬೇಕೆಂಬ ನೆಮ್ಮದಿಯ ಮೂಲದ ಬಗ್ಗೆ ಇದು ಒಡನುಡಿಸುತ್ತದೆ. ‘ತಪ್ದಂಡ’, ಋಣ ಮುಕ’್ತ ಕತೆಗಳೂ ಓದಿಸಿಕೊಂಡು ಹೋಗುತ್ತವೆ.  

ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಗ್ರಾಮ್ಯ ಬದುಕಿನ ಸಣ್ಣ ಸಂಗತಿಗಳನ್ನು ದಾಖಲಿಸುವುದು, ಸಂಪ್ರದಾಯ, ರೂಢಿ, ಪದ್ಧತಿಗಳ ಕುರಿತು ಸೂಕ್ಷ್ಮವಾಗಿ ಕಟ್ಟಿಕೊಡುವುದು, ಪ್ರತಿ ಪಾತ್ರದ ಒಳಗಿನ ತಾಕಲಾಟ, ಅದರ ಹಿನ್ನೆಲೆ, ಹಳ್ಳಿಗಾಡಿನ ಮೂಲ ಉದ್ಯೋಗ ಎಲ್ಲವನ್ನೂ ಹಿಡಿದಿಡುವ ಪರಿ ಅನನ್ಯವೆನಿಸಿದೆ. ಮಲ್ಲಿಕಾರ್ಜುನ ಅವರೊಳಗೊಬ್ಬ ಅಪರೂಪದ ಕತೆಗಾರ ಅಡಗಿದ್ದಾನೆ ಎಂಬುದಕ್ಕೆ ಇಲ್ಲಿನ ಬಹುತೇಕ ಕತೆಗಳು ಸಾಬೀತು ಪಡಿಸುತ್ತವೆ.   

ದೀಡೆಕರೆ ಜಮೀನು-ಕತಾ ಸಂಕಲನ 

ಲೇಖಕರು-ಮಲ್ಲಿಕಾರ್ಜುನ ಶೆಲ್ಲಿಕೇರಿ 

ಪ್ರಕಾಶಕರು-ಕಾಚಕ್ಕಿ ಪ್ರಕಾಶನ ಕುಣಿಗಲ್ 

ವರ್ಷ-2022 ಪುಟಗಳು-166 ಬೆಲೆ-150/- 

- *ನಾಗೇಶ್ ಜೆ. ನಾಯಕ

ಶಿಕ್ಷಕರು, ಶ್ರೀ ರಾಮಲಿಂಗೇಶ್ವರ ಹೈಸ್ಕೂಲ್ ಉಡಿಕೇರಿ

ಬೈಲಹೊಂಗಲ ತಾಲ್ಲೂಕು, ಬೆಳಗಾ" ಜಿಲ್ಲೆ.  



- * * * -