ಅಮ್ಮಿನಬಾವಿ ಶ್ರೀಗುರುಶಾಂತಲಿಂಗ ಶಿವಯೋಗಿಗಳ ರಥೋತ್ಸವ

ಅಮ್ಮಿನಬಾವಿ ಶ್ರೀಗುರುಶಾಂತಲಿಂಗ ಶಿವಯೋಗಿಗಳ ರಥೋತ್ಸವ Amminabawi Sri Gurushantalinga Shiva Yogis Chariot Festival

ಲೋಕದರ್ಶನ ವರದಿ 

ಅಮ್ಮಿನಬಾವಿ 24: ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಪುರುಷರಾದ ಮಹಾತಪಸ್ವಿ ಶ್ರೀಗುರುಶಾಂತಲಿಂಗ ಶಿವಯೋಗಿಗಳ ವಾರ್ಷಿಕ ರಥೋತ್ಸವ ಸೋಮವಾರ ಅಪಾರ ಭಕ್ತರ ಜಯಘೋಷದ ಮಧ್ಯೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ವಿಶೇಷವಾಗಿ ಪುಷ್ಪಗಳಿಂದ ಅಲಂಕರಿಸಲಾಗಿದ್ದ ರಥಕ್ಕೆ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯರ ಸನ್ನಿಧಾನದಲ್ಲಿ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯರು ಪೂಜೆಸಲ್ಲಿಸಿದರು. ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯರು, ಮೊರಬ ಜಡಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯರು, ಕಲಬುರ್ಗಿ ಜಿಲ್ಲೆ ಬೆಳಗುಂಪಾ ಬೃಹನ್ಮಠದ ಶ್ರೀಅಭಿನವ ಪರ್ವತೇಶ್ವರ ಶಿವಾಚಾರ್ಯರು, ವಿಜಯನಗರ ಜಿಲ್ಲೆ ಹಂಪಸಾಗರ ನವಲಿಹಿರೇಮಠದ ಶ್ರೀಅಭಿನವ ಶಿವಲಿಂಗರುದ್ರಮುನಿ ಶಿವಾಚಾರ್ಯರು, ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬೃಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯರು, ಬೆಳಗಾವಿ ಜಿಲ್ಲೆ ಕಡವಿಶಿವಾಪೂರ ಹಿರೇಮಠದ ಶ್ರೀಜಡೆತಲೆ ಮರುಳಸಿದ್ಧ ಶಿವಾಚಾರ್ಯರು, ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.  

ಕರಡಿಮಜಲು, ಡೊಳ್ಳು, ಸಂಬಾಳ ಸೇರಿ ವಿವಿಧ ಜನಪದ ವಾದ್ಯ-ಮೇಳಗಳೊಂದಿಗೆ ಆರಂಭಗೊಂಡ ರಥೋತ್ಸವವು ಸಂಸ್ಥಾನ ಪಂಚಗೃಹ ಹಿರೇಮಠದಿಂದ ಹೊರಟು ಇಸ್ಲಾಂ ಧರ್ಮೀಯರ ಪ್ರಾರ್ಥನಾ ಮಂದಿರ, ಅಮ್ಮಿನಬಾವಿ ಮುಖ್ಯಪೇಟೆ ರಸ್ತೆಯಲ್ಲಿ ಸಂಚರಿಸಿ ಕರಡಿಗುಡ್ಡ ರಸ್ತೆಗೆ ಹೊಂದಿಕೊಂಡ ಈಶ್ವರ ದೇವಾಲಯದವರೆಗೆ ಹೋಗಿ ಮರಳಿ ಅದೇ ಮಾರ್ಗವಾಗಿ ಸಂಸ್ಥಾನ ಪಂಚಗೃಹ ಹಿರೇಮಠವನ್ನು ತಲುಪಿತು. ದಾರಿಯುದ್ದಕ್ಕೂ ಭಕ್ತರು ಅಲಂಕೃತ ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ತಮ್ಮ ಭಕ್ತಿ ಸಮರೆ​‍್ಣ ಮಾಡುವುದು ಸಾಮಾನ್ಯವಾಗಿತ್ತು. ಜೊತೆಗೆ ಜನರು ತಮ್ಮ ಮನೆಯ ಮೇಲೆ ಹತ್ತಿ ಪುಷ್ಪವೃಷ್ಟಿಮಾಡಿ ಜಯಘೋಷ ಹೇಳಿ ಗಮನಸೆಳೆದರು. ಅಮ್ಮಿನಬಾವಿ, ಮರೇವಾಡ, ತಿಮ್ಮಾಪೂರ, ಕರಡಿಗುಡ್ಡ, ಕವಲಗೇರಿ, ಚಂದನಮಟ್ಟಿ, ಹಾರೋಬೆಳವಡಿ ಸೇರಿದಂತೆ ಹಲವಾರು ಗ್ರಾಮಗಳೂ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರದಿಂದಲೂ ಅಪಾರ ಸಂಖ್ಯೆಯ ಭಕ್ತಸ್ತೋಮ ಈ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಗುರುಶಾಂತಲಿಂಗ ಶಿವಯೋಗಿಗಳ ಸಂಭ್ರಮದ ರಥೋತ್ಸವಕ್ಕೆ ಸಾಕ್ಷಿಯಾದರು.