ಬಲವಂತವಾಗಿ ಹಿಂದಿ ಹೇರಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ: ಅಮಿತ್ ಶಾ ಕ್ಷಮೆ ಕೋರಬೇಕು: ದಿನೇಶ್ ಗುಂಡೂರಾವ್

ಬೆಂಗಳೂರು, ಸೆ 16   ದೇಶಾದ್ಯಂತ ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿತು.  

ನಗರದ ಆನಂದರಾವ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದಲರ್ಿ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ನವಾಜ್ ಮತ್ತಿತರರ ಮುಖಂಡರು ಕೇಂದ್ರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಲವಂತವಾಗಿ ಹಿಂದಿ ಹೇರುತ್ತಿರುವ ಅಮಿತ್ ಶಾ ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.  

  ದಿನೇಶ್ ಗುಂಡೂರಾವ್ ಮಾತನಾಡಿ, ವಿವಿಧತೆಯಲ್ಲಿ ಏಕತೆಗೆ ಹೆಸರಾಗಿರುವ ಭಾರತ ತನ್ನದೇ ಆದ ವಿಭಿನ್ನ ಸಂಸ್ಕೃತಿ, ವೈವಿಧ್ಯತೆ ಹೊಂದಿದೆ. ಎಲ್ಲರಿಗೂ ಅವರದೇ ಆದ ಭಾಷೆಗಳಿವೆ. ಆದರೆ ಒಂದೇ ಭಾಷೆ. ಒಂದೇ ಧರ್ಮ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡುತ್ತಿರುವುದು ಖಂಡನೀಯ. ಮೊದಲು ಅವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.  

ಭಾರತ ಒಂದೇ ಭಾಷಿಕರು, ಧಮರ್ಿಯರು ವಾಸಿಸುವ ರಾಷ್ಟ್ರವಲ್ಲ, ಹಲವು ರಾಜ್ಯಗಳು ಕೂಡಿ ಆಗಿರುವ ದೇಶ. ಎಲ್ಲಾ ರಾಜ್ಯಗಳಲ್ಲೂ ವಿಭಿನ್ನತೆಯಿದೆ. ಕರ್ನಾಟಕದಲ್ಲಿ ತುಳು, ಕೊಂಕಣಿ, ಕನ್ನಡ ಭಾಷೆ ಬಳಕೆಯಲ್ಲಿದ್ದು, ಇಂತಹ ಹೇಳಿಕೆಕೊಟ್ಟಾಗ ನಾವು ವಿರೋಧಿಸಬೇಕಾಗುತ್ತದೆ. ನಾವು ಎಲ್ಲ ಭಾಷೆಗಳನ್ನು ಪ್ರೀತಿಸುತ್ತೇವೆ. ಒಂದೇ ದೇಶ ಎನ್ನುವುದೇನೋ ಸರಿ. ಆದರೆ ಒಂದೇ ಭಾಷೆ ಅಂದರೆ ಒಪ್ಪಲಾಗದು ಎಂದರು.  

ಗೃಹ ಸಚಿವ ಅಮಿತ್ ಶಾ ಗೆ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುವ ಧೈರ್ಯ ನಮ್ಮ ಸಂಸದರಿಗಿಲ್ಲ.  ರಾಜ್ಯದಿಂದ 25 ಸಂಸದರು ಆರಿಸಿಹೋಗಿದ್ದಾರೆ. ಅವರು ತಮ್ಮ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆಯೇ. ರಾಜ್ಯದ ಭಾಷೆಗೆ ಧಕ್ಕೆ ಬರುವ ಸಂದರ್ಭದಲ್ಲೂ ಅವರು ಪ್ರತಿಭಟಿಸುವುದಿಲ್ಲ ಎಂದರೆ ಯಾಕಾಗಿ ಅವರು ನಮ್ಮ ಪ್ರತಿನಿಧಿಗಳಾಗಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.  

ವಿವಾದ ಸೃಷ್ಟಿಸುವುದೇ ಬಿಜೆಪಿ ನಾಯಕರ ಕೆಲಸವಾಗಿದೆ. ರಾಜ್ಯದಲ್ಲಿ ನೆರೆ ಸಂತ್ರಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರ ನೆರವಿಗೆ ಬರಲು ಕೇಂದ್ರ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ. ಪರಿಹಾರ ನೀಡುವುದು ಬಿಟ್ಟು ಬೇರೆ ಎಲ್ಲಾ ಕಿತಾಪತಿ ಮಾಡುತ್ತಿದ್ದಾರೆ. ಎಲ್ಲರಿಗೂ ಅವರದ್ದೇ ಆದ ಭಾಷೆ, ಆಹಾರ ಸಂಸ್ಕೃತಿ ಇದೆ. ಅಂತಹ ವೈವಿಧ್ಯತೆಗೆ ಧಕ್ಕೆ ತರುತ್ತಿರುವುದು ಹಾಗೂ ದೇಶವನ್ನು  ಒಡೆದು ಆಳಲು ಹೊರಟಿರುವುದು ಖಂಡನೀಯ ಎಂದರು.  

ಹಿಂದಿ ಭಾಷೆಗೆ ನಮ್ಮ ವಿರೋಧವಿಲ್ಲ. ಆದರೆ ಬಲವಂತವಾಗಿ ಹಿಂದಿ ಹೇರಲು ಮುಂದಾಗಿರುವುದು ಖಂಡನೀಯ. ದೇಶದಲ್ಲಿರುವ ಭಾಷೆಗಳು ವೈವಿಧ್ಯತೆಯ ಪ್ರತೀಕವಾಗಿವೆ. ಆದರೆ ಒಂದೇ ಭಾಷೆ, ಒಂದೇ ಆಹಾರ ಎಂದು ವಿಭಜಿಸುವುದು ಸರಿಯಲ್ಲ. ಕನ್ನಡಿಗರನ್ನು ವಿಭಾಗ ಮಾಡಲು ನಾವು ಬಿಡುವುದಿಲ್ಲ ಎಂದರು.  

ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಸೇರಿದಂತೆ  ಕಾಂಗ್ರೆಸ್ ನ ಅನೇಕ ನಾಯಕರು ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ನಡೆಸಿದ್ದಾರೆ.  ಇನ್ನು ಪ್ರತ್ಯೇಕ ಕನ್ನಡ ದ್ವಜ ಕುರಿತು ವಿರೋಧಿಸುವುದು ಸಹ ಸರಿಯಲ್ಲ. ಇದನ್ನು ಕಾಂಗ್ರೆಸ್  ತೀವ್ರವಾಗಿ ಖಂಡಿಸುತ್ತದೆ ಎಂದರು.  

ನೆರೆ ಸಂತ್ರಸ್ಥರ ವಿಚಾರದಲ್ಲೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ರಾಜ್ಯ ಸರ್ಕಾರ ಸತ್ತು ಹೋಗಿದ್ದು, ಪರಿಹಾರ ಪಡೆಯಲು ಕೇಂದ್ರದ ಮೇಲೆ ಒತ್ತಡವನ್ನೇ ಹಾಕಿಲ್ಲ. ಸಂತ್ರಸ್ಥರು ಬೀದಿಗೆ ಬಿದ್ದಿದ್ದಾರೆ. ನೆರೆ ಪರಿಸ್ಥಿತಿ ಕುರಿತು ಬುಧವಾರ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ಮುಂದಿನ ಹೋರಾಟ ರೂಪಿಸುತ್ತೇವೆ ಎಂದರು.  

ಒಂದು ಕಡೆ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳುತ್ತಾರೆ. ಮತ್ತೊಂದೆಡೆ ವಿವಿಧ ಪ್ರಕರಣಗಳನ್ನು ತನಿಖೆಗೆ ವಹಿಸುತ್ತಿದ್ದಾರೆ. ಸೇಡು ತೀರಿಸಿಕೊಳ್ಳಲು ಮುಂದಾದರೆ ನಿಮಗೆ ಯಶಸ್ಸು ಸಿಗುವುದಿಲ್ಲ. ನಿಮ್ಮ ಕ್ರಮದಿಂದ ನಾವೇನು ಭಯಬೀತರಾಗಲ್ಲ. ಬರೀ ವರ್ಗಾವಣೆ ದಂಧೆ ಮಾಡುವುದನ್ನು ಬಿಟ್ಟು ಜನಪರ ಆಡಳಿತ ನಡೆಸಲು ಆದ್ಯತೆ ನೀಡಿ ಎಂದರು.  

ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಮಾತನಾಡಿ, ನಮ್ಮ ದೇಶ ಹಲವು ಸಂಸ್ಕೃತಿ, ಭಾಷೆಯ ದೇಶ. ಇಂತದ್ದೇ ಭಾಷೆ ಮಾತನಾಡಬೇಕು ಅಂದರೆ ಹೇಗೆ?. ಕನ್ನಡ,  ತೆಲುಗು, ಮಲೆಯಾಳಿ, ಬೋಜಪುರಿ, ತಮಿಳು ಎಲ್ಲವೂ ನಮ್ಮಲ್ಲಿ ಹಾಸುಹೊಕ್ಕಾಗಿದೆ. ನಮ್ಮ ಭಾಷೆಯನ್ನೇ ನಾವು ವಿಧವಿಧವಾಗಿ ಮಾತನಾಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಡ್ಡಾಯ ಮಾಡುವಂತಿಲ್ಲ. ನಮ್ಮ ಭಾಷೆ, ಸಂಸ್ಕೃತಿ ಮೇಲೆ ದಬ್ಬಾಳಿಕೆ ಸಹಿಸುವುದಿಲ್ಲ. ನೀವು ಬಲವಂತವಾಗಿ ಹೇರಲು ಹೊರಟರೆ ನಾವು ಉಗ್ರಹೋರಾಟವನ್ನೇ ಮಾಡಬೇಕಾಗುತ್ತದೆ ಎಂದರು.  

ಕನ್ನಡಕ್ಕೆ ಪ್ರತ್ಯೇಕ ಧ್ವಜ ತರಲು ನಾವು ಹೆಜ್ಜೆ ಇಟ್ಟಿದ್ದೇವು. ನಿಮಗೆ ತಾಕತ್ತಿದ್ದರೆ ಮೊದಲು ಪ್ರತ್ಯೇಕ ಜಾರಿಗೆ ತನ್ನಿ ಎಂದು ರಿಜ್ವಾನ್ ಅರ್ಷದ್  ಸವಾಲು ಹಾಕಿದರು.