ಹುಬ್ಬಳ್ಳಿ, ಜ 19 : ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಷಿ ಅವರ ಹುಬ್ಬಳ್ಳಿ ನಿವಾಸದಲ್ಲಿ ಗೃಹ ಸಚಿವ ಅಮಿತ್ ಶಾ ಭಾನುವಾರ ಬೆಳಗ್ಗೆ ಪುಟ್ಟ ಮಕ್ಕಳಿಗೆ ಪಲ್ಸ್ ಪೊಲಿಯೋ ಲಸಿಕೆ ಹಾಕಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಅಮಿತ್ ಶಾ ಶನಿವಾರ ಸಂಜೆ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಪರ ಮಹಾ ಜನ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನಂತರ, ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಶನಿವಾರ ಮಧ್ಯರಾತ್ರಿವರೆಗೆ ಸರಣಿ ಸಭೆಗಳನ್ನು ನಡೆಸಿದರು. ಭಾನುವಾರ ಬೆಳಗ್ಗೆಯೂ ಕೆಲ ನಾಯಕರೊಂದಿಗೆ ಸಭೆ ನಡೆಸಿದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಜನವರಿ 24 ರಂದು ತಮ್ಮ ದಾವೋಸ್ ಪ್ರವಾಸದಿಂದ ಹಿಂದಿರುಗಿದ ನಂತರವೇ ಬಹುನಿರೀಕ್ಷಿತ ತಮ್ಮ ಸಂಪುಟ ವಿಸ್ತರಣೆ ಸಾಧ್ಯವಾಗುವ ಸಾಧ್ಯತೆಯಿದೆ. ಏಕೆಂದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಶನಿವಾರ ಈ ವಿಷಯವನ್ನು ಔಪಚಾರಿಕವಾಗಿ ಚರ್ಚಿಸಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗಲಿಲ್ಲ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನವರಿ 21 ರಿಂದ 24ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಳ್ಳಲು ಭಾನುವಾರ ದಾವೋಸ್ ಗೆ ತೆರಳುವ ನಿರೀಕ್ಷೆಯಿದೆ.
ಪ್ರಹ್ಲಾದ್ ಜೋಷಿ ಅವರ ನಿವಾಸದಲ್ಲಿ ಬೆಳಗಿನ ಉಪಹಾರ ಸೇವಿಸಿದ ನಂತರ ಅಮಿತ್ ಶಾ ವಿಶೇಷ ವಿಮಾನದಲ್ಲಿ ದೆಹಲಿಗೆ ಮರಳಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಎಸ್ .ವಿ. ಸಂಕನೂರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.