ಅಮಿತ್ ಷಾ ಸುಳ್ಳಿನ ಪ್ರಚಾರಕ:ಸಿದ್ದರಾಮಯ್ಯ

ಹುಬ್ಬಳ್ಳಿ,ಜ 9            ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ಪೌರತ್ವ ತಿದ್ದುಪಡಿ ಕಾನೂನು ಜಾರಿಗೆ ತಂದಿದ್ದು, ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಪೌರತ್ವ ತಿದ್ದುಪಡಿ ಮಸೂದೆ ಸಿಎಎ ಪರ ಇದೇ 19ರಂದು ಹುಬ್ಬಳ್ಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ಷಾ ಅಗಮಿಸುತ್ತಿರುವ ವಿಚಾರವಾಗಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮದ ಆಧಾರದ ಮೇಲೆ ಈ ತಿದ್ದುಪಡಿ ಮಾಡಿದ್ದು, ದೇಶದಲ್ಲಿ ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಯನ್ನು ನಾಶಮಾಡುತ್ತಿದೆ. ವಿದ್ಯಾರ್ಥಿಗಳ ಸ್ವಾತಂತ್ರ್ಯವನ್ನು ಜನರ ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಿದೆ ಎಂದರು.  

ಬಿಜೆಪಿ ವಿರುದ್ಧದ ನಡೆಯನ್ನು ಕಾಂಗ್ರೆಸ್ ಪ್ರತಿಭಟಿಸುತ್ತಿದೆ. ಪೌರತ್ವ ತಿದ್ದುಪಡಿಯನ್ನು ಕಾಂಗ್ರೆಸ್ ಬ್ಯಾನರ್ ಅಡಿಯಲ್ಲಿಯೇ ಎಲ್ಲಾ ಸಂದರ್ಭಗಳಲ್ಲಿಯೂ ಪ್ರತಿಭಟನೆ ಮಾಡಲು ಸಾಧ್ಯವಿಲ್ಲ. ಒಮ್ಮೊಮ್ಮೆ ಹೋರಾಟಕ್ಕೆ ಕೆಲವು ಸಂಘಸಂಸ್ಥೆಗಳು ಮುಂದಾಗುತ್ತವೆ. ಹೀಗಾಗಿ ಕೇವಲ ಕಾಂಗ್ರೆಸ್ ಬ್ಯಾನರ್ ಅಡಿ ಒಂದೇ ಬಾರಿಗೆ ಪ್ರತಿಭಟನೆ ನಡೆಸಲು ಸಾಧ್ಯವಿಲ್ಲ. ಏನೇ ಆಗಲಿ ಕೇಂದ್ರದ ಪೌರತ್ವ ತಿದ್ದುಪಡಿ ಕಾಯಿದೆಗೆ ಕಾಂಗ್ರೆಸ್ನ ವಿರೋಧ ಸ್ಪಷ್ಟವಾಗಿದೆ ಎಂದರು. 

ಬಿಜೆಪಿ ಸುಳ್ಳು ಹೇಳುತ್ತಿದೆ ಎನ್ನುವುದನ್ನು ಜನರಿಗೆ ಮನವರಿಕೆಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.ಜನರಿಗೆ ವಸ್ತು ಸ್ಥಿತಿಯನ್ನು ತಿಳಿಸುವುದು ನಮ್ಮ ಕಾರ್ಯ ಯೋಜನೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.