ತಾಳಿಕೋಟಿ 19: ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಎನ್ನುವುದು ಕೆಲವರಿಗೆ ವ್ಯಸನವಾಗಿದೆ ಎಂದು ಹೇಳುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸುವುದರ ಜೊತೆಗೆ ದೇಶದ ಸಂವಿಧಾನವನ್ನೂ ಅವಮಾನಿಸಿದ್ದಾರೆ ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ ಎಂದು ದಲಿತ ಮುಖಂಡ ಜೈಭೀಮ ಮುತ್ತಗಿ ಹೇಳಿದ್ದಾರೆ.ಅಂಬೇಡ್ಕರ್ ನಮಗೆ ವ್ಯಸನ ಅಲ್ಲ ನಮ್ಮ ಪಾಲಿನ ದೇವರು,ನಿತ್ಯ ಸ್ಮರಣೆ, ನಮ್ಮ ಉಸಿರು ಇರುವವರೆಗೆ ಈ ಭೂಮಿಯಲ್ಲಿ ಸೂರ್ಯ-ಚಂದ್ರ ಇರುವವರೆಗೆ ಅಂಬೇಡ್ಕರ್ ಸ್ಮರಣೆ ಇರಲಿದೆ.ಇಂಥಹ ಶ್ರೇಷ್ಠ ದಾರ್ಶನಿಕರನ್ನು ಅವಮಾನಿಸುವಂತಹ ಹೀನ ಧೈರ್ಯ ತೋರಿರುವ ಅಮಿತ್ ಶಾ ಅವರು ದೇಶದ ಮುಂದೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು,ಇಂಥವರು ಸಂಸತ್ತಿನಲ್ಲಿ ಇರಲು ಯೋಗ್ಯರಲ್ಲ.ತಮ್ಮ ಸಚಿವ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ಕೊಟ್ಟು ಹೊರಗೆ ಬರಬೇಕೆಂದು ಆಗ್ರಹಿಸಿದ್ದಾರೆ.ಅಮಿತ್ ಶಾ ಅವರ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ಈ ವಿಷಯವನ್ನು ಪರಿಗಣಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಸತ್ತಿನಲ್ಲಿರುವ ದಲಿತ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಸಂಸದರು ಅಮಿತ್ ಶಾ ಹೇಳಿಕೆಯನ್ನು ಉಗ್ರವಾಗಿ ಖಂಡಿಸಬೇಕು ಎಂದು ಹೇಳಿರುವ ಅವರು ಡಾ.ಅಂಬೇಡ್ಕರ್ ಅವರು ಸಂವಿಧಾನ ರಚಿಸದೇ ಇದ್ದಿದ್ದರೆ ಅಮಿತ್‌ಶಾ ಇಂದು ಗೃಹ ಸಚಿವರಾಗಲು ಸಾಧ್ಯವಿರಲಿಲ್ಲ ಎಂಬುದನ್ನು ಅರಿಯಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.