ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಭಿನ್ನವೃತ್ತಿಗಳಲ್ಲಿ ನಿರತರಾದ ಅನೇಕರು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ನ್ಯಾಯಾಂಗ ಕ್ಷೇತ್ರದಲ್ಲಿ ವೃತ್ತಿ ನಿರತರಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡಿದವರಲ್ಲಿ ಕೋ.ಚೆನ್ನಬಸಪ್ಪ, ಹನುಮಂತಪ್ಪರಾಯಪ್ಪ, ವೆಂಕಟೇಶ ಕುಲಕರ್ಣಿ ಮೊದಲಾದವರು ಗಮನಾರ್ಹರಾಗಿದ್ದಾರೆ. ಹಾಗೆಯೇ ವೃತ್ತಿಯಲ್ಲಿ ನ್ಯಾಯಾಧೀಶರಾಗಿ ಪ್ರವೃತ್ತಿಯಲ್ಲಿ ಕವಿಯಾಗಿ, ಬದುಕಿನ ಆಕಸ್ಮಿಕ ತಿರುವುಗಳ ಸಂಚಾರಿ ನೆಲೆಗಳನ್ನು ಜಯಿಸಿ ಕಾವ್ಯ ಕ್ಷೇತ್ರದಲ್ಲಿ ಕಾವ್ಯಕೃಷಿಯನ್ನು ಮಾಡಿದವರು ಕವಿ ಜಿನದತ್ತ ದೇಸಾಯಿಯವರು.
ಮೂಲತಃ ಜಿನದತ್ತ ದೇಸಾಯಿಯವರು ಧಾರವಾಡ ಜಿಲ್ಲೆಯ ಅಮ್ಮಿನಭಾವಿಯವರು. ಈ ಊರು ಶಾಂತಿನಾಥ ಬಸದಿಯಿಂದ ಪ್ರಖ್ಯಾತವಾಗಿದ್ದು, ಬಸದಿಯ ಶಾಸನದಲ್ಲಿ ಕನ್ನಡ ಛಂದಸ್ಸಿನ ಚರಿತ್ರೆಯಲ್ಲಿರುವ ಮೂಲ ಷಟ್ಪದಿಯ ಪ್ರಥಮ ಉಲ್ಲೇಖವಿದೆ. ಅವರು ಎಪ್ರಿಲ್ 3, 1933ರಲ್ಲಿ ಜನಿಸಿದರು. ತಂದೆ ನೇಮಿಚಂದ್ರ ಚೆನ್ನಪ್ಪ ದೇಸಾಯಿ. ಅವರ ದತ್ತಕ ತಂದೆ ಗುಂಡಪ್ಪ ಭರಮಗೌಡ ದೇಸಾಯಿ. ದತ್ತಕ ತಾಯಿ ಜಾನಕ್ಕ. ಜಿನದತ್ತ ದೇಸಾಯಿಯವರು ಅಮ್ಮಿನಭಾವಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪ್ರಾಥಮಿಕ, ನವಲಗುಂದದ ಮಾಡೆಲ್ ಹೈಸ್ಕೂಲಿನಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದರು. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಕನ್ನಡದೊಂದಿಗೆ ಪಡೆದರು. ಅವರು ಧಾರವಾಡದ ಜೆ.ಎಸ್.ಎಸ್. ಕಾಲೇಜಿನಿಂದ ಎಲ್.ಎಲ್.ಬಿ. ಪದವಿಯನ್ನು ಪಡೆದು, ಮದ್ರಾಸ್ ಹಿಂದಿ ಪ್ರಚಾರ ಸಭಾದಿಂದ ‘ಪ್ರವೇಶಿಕಾ’ ಪರೀಕ್ಷೆಯನ್ನು ತೇರ್ಗಡೆಯಾದರು. ದೇಸಾಯಿಯವರು 1959ರಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು. ಬೆಳಗಾವಿಯಲ್ಲಿ ನಾಲ್ಕು ವರ್ಷಗಳವರೆಗೆ ವಕೀಲ ವೃತ್ತಿಯನ್ನು ಪೂರೈಸಿದ ಅವರು 1962 ರಿಂದ 1966 ರವರೆಗೆ ಸರ್ಕಾರಿ ಸಹಾಯಕ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದರು. ನಂತರ 1966 ರಿಂದ 1991 ರವರೆಗೆ ಮುನ್ಸೀಫ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.
ಜಿನದತ್ತರು 1945ರಲ್ಲಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಪ್ರಭಾತಫೇರಿಗಾಗಿ ದೇಶಭಕ್ತಿ ಗೀತೆಗಳನ್ನು ಬರೆಯುವ ಮೂಲಕ ಕಾವ್ಯಾಭಿವ್ಯಕ್ತಿಯನ್ನು ಆರಂಭಿಸಿದರು. ಅಲ್ಲದೇ ಅವರು ನವಲಗುಂದದಲ್ಲಿ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿದ್ದದು ಅತ್ಯಂತ ಎಳೆ ವಯಸ್ಸಿನ ಆರಂಭದ ನಿದರ್ಶನ. ನಂತರ ಧಾರವಾಡದ ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿಯಾದದ್ದು ಅದರ ಮುಂದಿನ ಬೆಳವಣಿಗೆ. ಭಾಷಣ, ಆಶುಭಾಷಣ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಿದ್ದ ಅವರು ಕವಿಯಾಗಿ ರೂಪಗೊಂಡದ್ದು ಅದೇ ಅವಧಿಯಲ್ಲಿ. ಡಾ.ವಿ.ಕೃ.ಗೋಕಾಕರ ಶಿಷ್ಯರಾಗಿ ಕಮಲಮಂಡಲದ ಸದಸ್ಯರಾಗಿ ದೇಸಾಯಿಯವರು ಕಾವ್ಯಸೃಷ್ಟಿಯ ನೆಲೆಗಳನ್ನು ಭದ್ರಪಡಿಸಿಕೊಂಡರು. 1954ರಲ್ಲಿ ಬಿ.ಎ. ಕೊನೆಯ ವರ್ಷದಲ್ಲಿ ಓದುವಾಗಲೇ ಅವರ ಮೊದಲ ಕವನ ಸಂಕಲನ ‘ನೀಲಾಂಜನ’ ಪ್ರಕಟವಾಯಿತು. ಡಾ. ವಿ.ಕೃ.ಗೋಕಾಕರು ಮುನ್ನುಡಿ ಬರೆದು ಜಿನದತ್ತರ ಕಾವ್ಯಶಕ್ತಿಯನ್ನು ಗುರುತಿಸಿದರು.
ಜಿನದತ್ತ ದೇಸಾಯಿಯವರು ಮೇ 1, 1955ರಂದು ನವಲಗುಂದದಲ್ಲಿ ಅಕ್ಕನ ಮಗಳಾದ ಸರೋಜಿನಿಯವರೊಂದಿಗೆ ಮದುವೆಯಾದರು. ನಂತರ 1959ರಲ್ಲಿ ಕುಟುಂಬದೊಂದಿಗೆ ಬೆಳಗಾವಿಗೆ ಬಂದು ನೆಲೆಸಿದರು. ಮುಂದೆ ಅವರು ವೃತ್ತಿಜೀವನದ ಫೈಲುಗಳಲ್ಲಿ ಸಂಪೂರ್ಣ ಕಳೆದು ಹೋಗದೆ ಹಲವು ಹತ್ತಾರು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇವರಿಗೆ ಮೂವರು ಮಕ್ಕಳು ಗುಂಡಪ್ಪ, ಬಾಹುಬಲಿ, ಹಾಗೂ ಮಗಳು ಶಾಂತಲಾ. ಜಿನದತ್ತ ದೇಸಾಯಿಯವರು ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿನದತ್ತ ದೇಸಾಯಿಯವರು ಹುಟ್ಟು ಪ್ರತಿಭೆಯ ಸಹಜ ಕವಿ. ಅವರು ನೀಲಾಂಜನ, ಮಧುಶಾಲಿನಿ, ಮತ್ತೆ ಬಂದಿದ್ದೇನೆ, ಮಾಗಿ, ಒಳಗಿನ ಮಳೆ, ಸಮಗ್ರ ಕಾವ್ಯ, ಜಿನದತ್ತರ ಆಯ್ದ ಕವಿತೆಗಳು, ಅಮೋಘ ಕವನ ಸಂಕಲನಗಳು ಮತ್ತು ಬೊಗಸೆಯಲ್ಲಿ ಬೆಳಕು, ಹೆಜ್ಜೆ ಸಾಲು, ಜಿನದತ್ತರ ಆಯ್ದ ಚುಟುಕುಗಳು, ಜಗದಗಲ ಮುಗಿಲಗಲ, ಗುಂಡನ ರೆಕ್ಕೆಯ ಚುಟುಕಿ ಹಕ್ಕಿ ಗಾಂಧಿನಗರ, ಸಹಸ್ರ ಚಂದ್ರ ಹನಿಗವನ ಸಂಕಲನಗಳು ಹೀಗೆ ಹದಿನೆಂಟಕ್ಕೂ ಹೆಚ್ಚು ಕವನಸಂಕಲನಗಳ ಮೂಲಕ ಕನ್ನಡ ನಾಡಿನ ಜನತೆಗೆ ಚಿರಪರಿಚಿತರಾಗಿದ್ದಾರೆ. ಅಲ್ಲದೇ ಉದಯ, ಮಧು ಸಂಗಮ, ಚಂದ್ರಾಭಿನಂದನ, ಜ್ಞಾನಿ ವಿಜ್ಞಾನಿ, ಸ್ನೇಹ ಸೌರಭ, ಸವ್ಯ ಸಾಚಿ, ಚುಟುಕು ತೋರಣ, ಕಾವ್ಯಾಭಿಷೇಕ ಸಂಕಲನಗಳನ್ನು ಸಂಪಾದಿಸಿದ ಅವರು ಸಾಹಿತ್ಯ ಬಳಗದಲ್ಲಿ ಸೇವೆಯನ್ನು ಸಲ್ಲಿಸಿ ಸೈ ಎನಿಸಿಕೊಂಡಿದ್ದಾರೆ.
ಕವಿ ಜಿನದತ್ತ ದೇಸಾಯಿಯವರು ‘ನೀಲಾಂಜನ’ ಮೊದಲ ಕವಿತಾ ಸಂಕಲನದಿಂದಲೇ ಹನಿಗವನ ಬರೆಯುತ್ತ ಬಂದ ಅವರು ವೈವಿಧ್ಯಮಯವಾದ ಹನಿಗವನ ಬರೆದಿದ್ದಾರೆ. ಸಂಖ್ಯೆ ಮತ್ತು ಗುಣಾತ್ಮಕತೆಯ ನೆಲೆಯಿಂದ ಅವರ ಹನಿಗವನಗಳು ಮಹತ್ವ ಪಡೆಯುತ್ತವೆ. ಬಸವಣ್ಣನವರ ವಚನಗಳಿಂದ ಪ್ರಭಾವಿತರಾದ ದೇಸಾಯಿಯವರು ಮಾನವತಾವಾದಿ ನೆಲೆಯಲ್ಲಿ ಮುನ್ನಡೆದರು. ಧಾರ್ಮಿಕ ಮೂಲಭೂತವಾದವನ್ನು ವಿರೋಧಿಸಿದ ಅವರು ಮೌಲ್ಯಗಳ ಸಂಘರ್ಷದ ಬಗೆಗೆ ಚಿಂತಿಸಿದವರು. ದೈವ-ವಿಧಿಗಳ ಆಸರೆಗಿಂತ ಮಾನವನ ಕ್ರಿಯಾಶೀಲತೆಯಲ್ಲಿ ನಂಬಿಕೆಯಿಟ್ಟ ಕವಿ ‘ಮಧು ಶಾಲಿನಿ’ ಗೆ ಮುನ್ನುಡಿ ಬರೆದಿರುವ ಹಿರೇಮಲ್ಲೂರ ಈಶ್ವರನ್ ಅವರು ಜಿನದತ್ತರ ಗುಣವನ್ನು ಯಥಾರ್ಥವಾಗಿ ಗುರುತಿಸಿದ್ದಾರೆ.
ಅವರು ಇಪ್ಪತ್ನಾಲ್ಕು ವರ್ಷಗಳ ನಂತರ ಪ್ರಕಟಿಸಿದ ‘ಮತ್ತೆ ಬಂದಿದ್ದೇನೆ’ ಸಂಕಲನ ಮತ್ತಷ್ಟು ಸಮಾಜಮುಖಿಯಾಗಿ ರೂಪತಳೆದಿದೆ. ಮಾಗಿ, ಒಳಗಿನ ಮಳೆ, ಬೊಗಸೆಯಲ್ಲಿ ಬೆಳಕು, ಹೆಜ್ಜೆಸಾಲು ಮೊದಲಾದ ಕವನಸಂಕಲನಗಳಲ್ಲಿ ಜಿನದತ್ತರು ಬದುಕಿನ ಸಮಗ್ರ ಮುಖಗಳ ದರ್ಶನ ಮಾಡಿದ್ದಾರೆ. ಪಂಪನನ್ನು ಹೃದಯ ತುಂಬಿ ನೆನೆಯುವ ದೇಸಾಯಿಯವರು ನಾರಾಯಣರಾವ್ ಹುಯಿಲಗೋಳ, ಎನ್.ಕೆ.ಕುಲಕರ್ಣಿ, ಶಿವಾನಂದ ಗಾಳಿ, ರವಿ ಉಪಾಧ್ಯೆ ಮೊದಲಾದ ಹಿರಿಕಿರಿಯರನ್ನು ಕುರಿತು ಬರೆದಿರುವ ಕವನಗಳು ಅವರು ಮಾನವೀಯ ಸಂಬಂಧಗಳಿಗೆ ಕೊಡುವ ಮಹತ್ವವನ್ನು ಬಿಂಬಿಸುತ್ತವೆ. ಆಯಾ ವ್ಯಕ್ತಿಗಳ ವಿಶಿಷ್ಟ ಸ್ವಭಾವಗಳನ್ನು ಸೂಕ್ತವಾದ ಸಂಯೋಜನೆಯಲ್ಲಿ ಕಟ್ಟಿಕೊಡುವುದರಿಂದ ಅವರ ವ್ಯಕ್ತಿ ಚಿತ್ರಣಗಳಿಗೆ ಸಹಜ ವೈವಿಧ್ಯತೆ ಪ್ರಾಪ್ತವಾಗಿದೆ.
ಗಾಂಧೀಜಿಯವರ ಗ್ರಾಮ ಭಾರತದ ಕನಸು ಸಾರ್ವತ್ರಿಕವಾಗಿ ಚಲಾವಣೆಯಲ್ಲಿದ್ದ ಕಾಲವದು. ಆ ಕಾರಣದಿಂದಲೇ ಪ್ರತಿಪಾದಿಸುವ ಮೌಲ್ಯಗಳಲ್ಲಿಯೂ ದೇಸಿಯ ಬದುಕಿನ ಸರಳತೆಯ ಛಾಯೆ ಇದ್ದೇ ಇದೆ. ಸರಳತೆಯಲ್ಲಿ ಗಹನವಾದುದನ್ನು ಒಳಗೊಳ್ಳುವ ಕ್ರಮ ಅವರೇ ರೂಪಿಸಿಕೊಂಡ ವಿಶಿಷ್ಟವಾದ ಕ್ರಮವೇ ಸರಿ. ‘ನೀಲಾಂಜನದಿಂದ ಒಳಗಿನ ಮಳೆ’ ಯವರೆಗಿನ ಏಳು ಸಂಕಲನಗಳೆಲ್ಲ ಸೇರಿ ಅಂದಾಜು ಏಳನೂರು ಪುಟಗಳಿಗೂ ಮೀರಿದ ದೇಸಾಯಿಯವರ ಸಮಗ್ರ ಕಾವ್ಯ ಸಂಪುಟ ಆಧುನಿಕ ಕನ್ನಡ ಕಾವ್ಯ ಪರಂಪರೆಯ ಭಿನ್ನ ಮಜಲುಗಳನ್ನು ಮೈಗೂಡಿಸಿಕೊಂಡು ಅನನ್ಯವಾಗಲು ನಡೆಸಿದ ಸುಧೀರ್ಘ ಕಾವ್ಯ ಯಾತ್ರೆಯ ಜೀವಂತ ದಾಖಲೆಯಾಗಿದೆ. ಬದುಕಿನ ಸಾಮಾನ್ಯ ಸಂಗತಿಗಳಲ್ಲಿ, ಮನುಷ್ಯತ್ವದಲ್ಲಿ ದೈವಿಕತೆಯನ್ನು ಕಂಡುಕೊಳ್ಳುವ ಮಾನವಕೇಂದ್ರಿತ ಚಿಂತನೆ ಅವರದು.
ವಿ.ಕೃ.ಗೋಕಾಕ, ಹಿರೇಮಲ್ಲೂರ ಈಶ್ವರನ್, ಸಿದ್ದಯ್ಯ ಪುರಾಣಿಕ ಎಚ್.ಎಸ್.ಕೆ, ದೇ.ಜ.ಗೌ., ಚೆನ್ನವೀರ ಕಣವಿ, ಮೊದಲಾದವರು ದೇಸಾಯಿಯವರ ಕೃತಿಗಳಿಗೆ ಬರೆದಿರುವ ಮುನ್ನುಡಿ-ಹಿನ್ನುಡಿಗಳಲ್ಲಿ ಅವರ ಕಾವ್ಯದ ವೈಶಿಷ್ಟ್ಯಗಳನ್ನು ಸಮರ್ಥವಾಗಿ, ಸೂಕ್ತವಾಗಿ ಗುರುತಿಸಿದ್ದಾರೆ. ಕವಿ ಮಿತ್ರ ಜಿನದತ್ತ ದೇಸಾಯಿಯವರಿಗೆ “ಹೊಸ ಹೂವ ಬೊಗಸೆಯಲಿ ಬೆಳಕ ಹಿಡಿಯುವ ತವಕ”ವನ್ನು ಗುರುತಿಸುತ್ತ ಕೊನೆಯಲ್ಲಿ “ಕವಿತಾಗುಣಾರ್ಣವನ ಸಂತತಿಗೆ ಕೊನೆಯಿಹುದೇ? ಎನ್ನತ್ತಾರೆ ನಾಡೋಜ ಚೆನ್ನವೀರ ಕಣವಿಯವರು. ‘ಹೆಜ್ಜೆಸಾಲಿನಲ್ಲಿ’ ಕಿರುಗೆಜ್ಜೆ ಕಟ್ಟುತ್ತ, ಕಾವ್ಯ ಕ್ಷೇತ್ರದ ಹಿನ್ನೆಲೆಗೆ ಮುನ್ನೆಲೆಗೆ ಸರಿದಾಡುತ್ತ ದಾಟಿಬಂದ, ಜಿನದತ್ತರ ಕಾವ್ಯಕ್ಕೆ ನಾಡಿನ ಜನತೆ ನೀಡಿದ ಗೌರವದ ಪ್ರತೀಕದಂತಿದೆ ಎನ್ನುತ್ತಾರೆ ಅವರು.
ಅಂಧರಿಗೆ, ಅಸಹಾಯಕರಿಗೆ, ದಾಸೋಹಿಯಾಗಿ ಪರಿವರ್ತಿಸಿಕೊಂಡಂತೆ ಅವರು ಉದಾರವಾಗಿ ಸಹಾಯ ಮಾಡುತ್ತ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ, ಸಾಂಸ್ಕೃತಿಕ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿ ಗುರುತಿಸಿಕೊಂಡಿದ್ದಾರೆ. ಬೆಳಗಾವಿ ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಭವನದ ಟ್ರಸ್ಟಿಯಾಗಿ, ಮಾಹೇಶ್ವರಿ ಅಂಧರ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ, ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಅವರು ಹಲವಾರು ಅಭಿನಂದನ ಸಮಾರಂಭಗಳನ್ನು ಸಂಘಟಿಸುವ, ಹಲವಾರು ಅಭಿನಂದನ ಗ್ರಂಥಗಳನ್ನು ಸಂಪಾದಿಸುವ ಕಾಯಕದಲ್ಲೂ ಸಕ್ರಿಯರು. ಧರ್ಮಸ್ಥಳ ಹಾಗೂ ಕಾರ್ಕಳದ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕದ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡ ಅವರು ಕೊಲ್ಲಾಪುರದ ಜೈನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದಾರೆ. 2010ರಲ್ಲಿ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದಾರೆ. ಧಾರವಾಡ ಹಾಗೂ ಮೈಸೂರಿನಲ್ಲಿ ನಡೆದ ಅಖಿಲ ಕರ್ನಾಟಕ ಜೈನ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಅಖಿಲ ಭಾರತ ಸಾಹಿತ್ಯ ಸಮ್ಮೆಳನದಲ್ಲಿ ಹಲವಾರು ಸಲ ಕಾವ್ಯವಾಚನ, ಪ್ರಬಂಧ ಮಂಡನೆ ಹಾಗೂ ನಾಡಿನ ಅನೇಕ ಕಡೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಅವರು 1970ರಷ್ಟು ಹಿಂದೆಯೇ ಪಾಶ್ಚಾತ್ಯ ದೇಶದ ಅಧ್ಯಯನ ತಂಡದ ಸದಸ್ಯರಾಗಿ ಇಂಗ್ಲೆಂಡ್, ಫ್ರಾನ್ಸ್, ಸ್ವಿಡ್ಜರ್್ಲಯಾಂಡ್ ಮುಂತಾದ ದೇಶಗಳ ಪ್ರವಾಸ ಕೈಗೊಂಡಿರುವುದು ವಿಶೇಷ.
ಕವಿ ಜಿನದತ್ತ ದೇಸಾಯಿಯವರಿಗೆ ಎಪ್ಪತ್ತೈದು ವಸಂತಗಳ ಅಮೃತಮಹೊತ್ಸವ ಸಂಭ್ರಮದಲ್ಲಿ ಅವರ ಗೆಳೆಯರೆಲ್ಲ ಸೇರಿ ‘ಗುಣಾರ್ಣವ’ ಎಂಬ ಅಭಿನಂದನ ಗ್ರಂಥವನ್ನು ಸಮರೆ್ಣಗೊಂಡಿದ್ದು, 2008ರಲ್ಲಿ ‘ಜಿನಸರೋಜ’ ಅಮೃತ ಮಹೋತ್ವವ ಸ್ಮರಣ ಸಂಚಿಕೆಯು ಬಿಡುಗಡೆಗೊಂಡಿದೆ. 2011ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ‘ಜಿನದತ್ತ ದೇಸಾಯಿ ಕಾವ್ಯಾನು ಸಂಧಾನ’ ಗ್ರಂಥ ಗೌರವ ಸಮರೆ್ಣಗೊಂಡಿದ್ದು, 2015ರಲ್ಲಿ ಕವಿ ಬಸವರಾಜ ವಕ್ಕುಂದ ಅವರು ‘ಜಿನದತ್ತ ದೇಸಾಯಿ ಜೀವನ ಕಾವ್ಯ’ ಗ್ರಂಥವನ್ನು ಸಮರ್ಿಸಿದ್ದಾರೆ. ಎಂ.ಮಂಜುನಾಥ ಅವರು ‘ಜಿನದತ್ತ ದೇಸಾಯಿ ಅವರ ‘ಚುಟುಕು ಸಾಹಿತ್ಯ’ ಎಂಬ ಎಂ.ಫಿಲ್ ಪ್ರಬಂಧವನ್ನು ಮಂಡಿಸಿರುವುದು ವಿಶೇಷ. ಅವರು ಸಲ್ಲಿಸಿದ ಸಾಹಿತ್ಯಿಕ, ಸಾಮಾಜಿಕ ಸೇವೆಯನ್ನು ಪರಿಗಣಿಸಿ ನಾಡಿನ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಸನ್ಮಾಸಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಚುಟುಕು ಭೂಷಣ ಪ್ರಶಸ್ತಿ, ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ, ಗೋಮಟೇಶ ವಿದ್ಯಾಪೀಠ ಸಾಹಿತ್ಯ ಪ್ರಶಸ್ತಿ, ಜೀವಮಾನ ಸಾಧನೆಗಾಗಿ ಪ್ರಶಸ್ತಿ, ನ್ಯಾಯಾಂಗ ಇಲಾಖೆಯಲ್ಲಿ ಕನ್ನಡದಲ್ಲಿ ಅತ್ಯುತ್ತಮ ತೀರ್ು ನೀಡುವ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಅವರನ್ನರಸಿಕೊಂಡು ಬಂದಿವೆ. ಕವಿ ಜಿನದತ್ತ ದೇಸಾಯಿಯವರಿಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿರುವುದು ಹೆಮ್ಮೆಯ ಸಂಗತಿ. ಅಲ್ಲದೇ 2021ನೆಯ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕಾಂತಾವರ ಕರ್ನಾಟಕ ಸಂಘದ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಧಾರವಾಡ ಜಿಲ್ಲಾ 6ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವು ಲಭಿಸಿದೆ. ಡಾ. ಜಿನದತ್ತ ದೇಸಾಯಿ ಅವರ ಸಮಗ್ರ ಸಾಹಿತ್ಯ ಕೃತಿಗಳನ್ನು ಅವಲೋಕಿಸಿ 2023ನೆಯ ಸಾಲಿನ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಯನ್ನು ಧಾರವಾಡ ದ.ರಾ.ಬೇಂದ್ರೆ ರಾಷ್ಟ್ರೀಯ ಧಾರವಾಡ ಟ್ರಸ್ಟ್ ನೀಡಿ ಗೌರವಿಸುತ್ತಿದೆ.
ವೃತ್ತಿಯಲ್ಲಿ ನ್ಯಾಯಾಧೀಶರಾಗಿ ಪ್ರವೃತ್ತಿಯಲ್ಲಿ ಕವಿಯಾಗಿ, ಕಾವ್ಯ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿ ನಿಲ್ಲಬಲ್ಲ ಕಾವ್ಯ ಕೃಷಿಯನ್ನು ನೀಡಿದ ದೇಸಾಯಿಯವರು ಸಾಮಾಜಿಕ ನ್ಯಾಯದ ಮಾನವೀಯ ಕಾಳಜಿಗಳನ್ನು ಎತ್ತಿ ಹಿಡಿದವರು. ನ್ಯಾಯ ಹಾಗೂ ಕಾವ್ಯ ಎರಡನ್ನೂ ಆರಾಧಿಸಿ ನ್ಯಾಯಾಧೀಶರು ಕಾವ್ಯಾಧೀಶರೂ ಆದದ್ದು ಅವರ ಕಾವ್ಯ ಕೃತಿಗಳೇ ಸಾಕ್ಷಿ. ನ್ಯಾಯಾಂಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಕವಿಯಾಗಿ ಕನ್ನಡ ಸಾಹಿತ್ಯದಲ್ಲಿ ಮಹತ್ತರ ಕೊಡುಗೆ ನೀಡಿದ ಏಕಮಾತ್ರ ಅಪರೂಪದ ವ್ಯಕ್ತಿ ಜಿನದತ್ತ ದೇಸಾಯಿಯವರು.
- * * * -