ಆಲೂರು ವೆಂಕಟರಾಯರು ಕನ್ನಡಿಗರ ಏಕೀಕರಣದ ಪ್ರೇರಣಾಶಕ್ತಿ

ಆಲೂರು ವೆಂಕಟರಾಯರು ಕನ್ನಡಿಗರ ಏಕೀಕರಣದ ಪ್ರೇರಣಾಶಕ್ತಿ  Alur Venkatarao was the driving force behind the unification of Kannadigas

ರಾಣೆಬೆನ್ನೂರು 17: ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಸಮಗ್ರ ಕನ್ನಡಿಗರನ್ನು ಒಗ್ಗೂಡಿಸಿ, ಅವರಲ್ಲಿ ನಾಡಿನ ಪ್ರೀತಿ ಮತ್ತು ಭಾಷಾಭಿಮಾನ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಏಕೈಕ ಕನ್ನಡದ ಅಗ್ರಗಣ್ಯ ನಾಯಕ ಆಲೂರು ವೆಂಕಟರಾಯರು ಕರ್ನಾಟಕದ ಕುಲಪುರೋಹಿತರಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಬಿ.ಜೆ.ಎಸ್‌.ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಎಂ. ಮೃತ್ಯುಂಜಯ ಹೇಳಿದರು.  

ನಗರದ ಕಾಲೇಜು ಸಭಾಭವನದಲ್ಲಿ ಐಕ್ಯೂಎಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಆಲೂರು ವೆಂಕಟರಾಯರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಕನ್ನಡ ಭಾಷೆ, ಸಂಸ್ಕೃತಿ, ಸಂಸ್ಕಾರ, ಆಚರಣೆ, ವಿಚಾರ ಹಾಗೂ ನಾಡಿನ ಅಭಿಮಾನವನ್ನು ತಮ್ಮ ಜೀವನದುದ್ದಕ್ಕೂ ಮೈಗೂಡಿಸಿಕೊಂಡಿದ್ದ ಆಲೂರು ವೆಂಕಟರಾಯರು, ತಮ್ಮ ಬಹುವರ್ಷಗಳ ಕನಸಾದ ಕರ್ನಾಟಕ ಏಕೀಕರಣವನ್ನು ಸಾಕಾರಗೊಳಿಸುವ ಮೂಲಕ ನಿರಂತರ ಹೋರಾಟದ ಫಲವಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು.  

ವಿಶೇಷ ಉಪನ್ಯಾಸ ನೀಡಿದ ಕಾಲೇಜಿನ ಉಪನ್ಯಾಸಕ ಹಾಗೂ ಸಾಹಿತಿ ಎಚ್‌.ಎ. ಭಿಕ್ಷಾವರ್ತಿ ಮಠ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಕನ್ನಡಿಗರು ಮುಂಬೈ, ಮದ್ರಾಸ್, ಹೈದರಾಬಾದ್, ಕೊಡಗು ಹಾಗೂ ಮೈಸೂರು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದರು. ಇಂತಹ ಸಂದರ್ಭದಲ್ಲಿ ಭಾಷೆ ಮತ್ತು ನಾಡಿನ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಆಲೂರು ವೆಂಕಟರಾಯರು ಕನ್ನಡಿಗರಿಗಾಗಿ ಪ್ರತ್ಯೇಕ ರಾಜ್ಯದ ಕನಸು ಕಂಡು ಅದನ್ನು ನನಸಾಗಿಸಲು ಶ್ರಮಿಸಿದರು ಎಂದು ಹೇಳಿದರು.  

ಆಲೂರು ವೆಂಕಟರಾಯರು ಮಾಡಿದ ತ್ಯಾಗದ ಫಲವಾಗಿ ಇಂದು ಕನ್ನಡಿಗರು ಹೆಮ್ಮೆಯಿಂದ ಮತ್ತು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಯುವ ಸಮುದಾಯ ನಿರಾಭಿಮಾನಿಗಳಾಗದೆ ಸ್ವಾಭಿಮಾನಿಗಳಾಗಬೇಕು ಎಂದು ಕರೆ ನೀಡಿದರು.  ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪರಶುರಾಮ ಪವಾರ್ ಮಾತನಾಡಿ, ಕುಲತಿಲಕ ಆಲೂರು ವೆಂಕಟರಾಯರು ಬಾಲಗಂಗಾಧರ ತಿಲಕರ ರಾಷ್ಟ್ರೀಯವಾದಿ ವಿಚಾರಗಳಿಂದ ಪ್ರಭಾವಿತರಾಗಿ ಕರ್ನಾಟಕದಾದ್ಯಂತ ಸಂಚರಿಸಿ ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯ ಮಾಡಿದರು. ಕರ್ನಾಟಕ ಎಂಬ ಹೆಮ್ಮೆಯ ಅಸ್ತಿತ್ವಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.  

ಕಾರ್ಯಕ್ರಮದ ಅಂಗವಾಗಿ ತರಬೇತುದಾರರಿಗಾಗಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಲೂರು ವೆಂಕಟರಾಯರ ಜನ್ಮದಿನದ ಪ್ರಯುಕ್ತ ಸಾಂಕೇತಿಕವಾಗಿ ದೀಪ ಬೆಳಗಿಸಿ ನಮನ ಸಲ್ಲಿಸಲಾಯಿತು.  ವೇದಿಕೆಯಲ್ಲಿ ಉಪನ್ಯಾಸಕರಾದ ಮುತ್ತುರಾಜ ಸಿದ್ದಣ್ಣನವರ, ಅಶೋಕ ಬಣಕಾರ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.  ಮುತ್ತುರಾಜ ನಾಯಕ ಪ್ರಾರ್ಥಿಸಿದರು. ಸುನೀಲ್ ತಳವಾರ ಸ್ವಾಗತಿಸಿದರು. ಸೌಮ್ಯ ವರ್ಣೇಕರ ನಿರೂಪಿಸಿದರು. ದೇವಿಕಾ ಚೌಟಿ ವಂದಿಸಿದರು.