ಗದಗದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ಅಕ್ರಮದ ಆರೋಪ: ತನಿಖೆಗೆ ಆಗ್ರಹ

ಗದಗದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಕುರಿತು ಅಕ್ರಮದ ಆರೋಪ: ತನಿಖೆಗೆ ಆಗ್ರಹ  Allegations of irregularities in the voter list revision process in Gadag: Probe demanded

ಲೋಕದರ್ಶನ ವರದಿ

ಗದಗ 7: ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಗಂಭೀರ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಭಾರತ ಚುನಾವಣಾ ಆಯೋಗವು ಉನ್ನತ ಮಟ್ಟದ ತನಿಖೆ ನಡೆಸಿ ಅರ್ಹ ಮತದಾರರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಸಮಾನತೆ ಟೆಂಪಲ್ ಟ್ರಸ್ಟ್ನ ಸಂಚಾಲಕ ಅನಿಲ್ ಮೆಣಸಿನಕಾಯಿ ಆಗ್ರಹಿಸಿದ್ದಾರೆ.  

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದಿಂದ ಚುನಾವಣಾ ಆಯೋಗವು ಎಸ್‌ಐಆರ್ ಪ್ರಕ್ರಿಯೆ ಕೈಗೊಂಡಿದೆ. ಅರ್ಹ ಮತದಾರರ ಹೆಸರುಗಳನ್ನು ಉಳಿಸಿ, ಅನರ್ಹ, ನಕಲಿ ಹಾಗೂ ಮೃತ ವ್ಯಕ್ತಿಗಳ ಹೆಸರುಗಳನ್ನು ಮಾತ್ರ ನಿಯಮಾನುಸಾರ ತೆಗೆದುಹಾಕಬೇಕಾಗಿದೆ. ಆದರೆ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಈ ಪ್ರಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ ಎಂದು ತಿಳಿಸಿದ್ದಾರೆ.  

ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಸಮರ​‍್ಕವಾಗಿ ಪಾಲಿಸಲಾಗುತ್ತಿಲ್ಲ. ಹಲವು ವಾರ್ಡ್ಗಳಲ್ಲಿ ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿಲ್ಲ. ಮತದಾರರಿಗೆ ಯಾವುದೇ ಪೂರ್ವ ಮಾಹಿತಿ ಅಥವಾ ನೋಟಿಸ್ ನೀಡದೇ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸಲ್ಲಿಸಲಾದ ದಾಖಲೆಗಳನ್ನು ಸಮರ​‍್ಕವಾಗಿ ಪರೀಶೀಲಿಸದೆ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಒಂದೇ ಕುಟುಂಬದ ಕೆಲವರ ಹೆಸರು ಉಳಿದು, ಉಳಿದವರ ಹೆಸರುಗಳನ್ನು ತೆಗೆದುಹಾಕಿರುವ ಪ್ರಕರಣಗಳೂ ಕಂಡುಬಂದಿವೆ ಎಂದು ಆರೋಪಿಸಿದ್ದಾರೆ.  

ಈ ಎಲ್ಲಾ ಆರೋಪಗಳ ಕುರಿತು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಗದಗ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ, ಎಷ್ಟು ಮನೆಗಳಿಗೆ ಬಿಎಲ್‌ಒಗಳು ಭೇಟಿ ನೀಡಿದ್ದಾರೆ, ಎಷ್ಟು ಪ್ರಕರಣಗಳಲ್ಲಿ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿಯನ್ನು ಸಾರ್ವಜನಿಕಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.  

ಯಾವುದೇ ನಿರ್ಲಕ್ಷ್ಯ ಅಥವಾ ನಿಯಮ ಉಲ್ಲಂಘನೆ ನಡೆದಿರುವುದು ದೃಢಪಟ್ಟರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಚುನಾವಣಾ ಆಯೋಗವು ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.  ಈ ಕುರಿತು ಚುನಾವಣಾ ಆಯೋಗವು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರ ಪರವಾಗಿ ಕಾನೂನುಬದ್ಧ ಹೋರಾಟ ನಡೆಸಲಾಗುವುದು. ಅಗತ್ಯವಿದ್ದರೆ ಭಾರತ ಚುನಾವಣಾ ಆಯೋಗ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸುವುದರ ಜೊತೆಗೆ ಕರ್ನಾಟಕ ಹೈಕೋರ್ಟ್ನ ಮೊರೆ ಹೋಗುವುದಾಗಿ ಅನಿಲ್ ಮೆಣಸಿನಕಾಯಿ ತಿಳಿಸಿದ್ದಾರೆ.