ಬೆಂಗಳೂರು 27: ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆ ಬೆಂಗಳೂರಿನಲ್ಲಿ ಕಿರುತೆರೆ ನಟ ಚರಿತ್ ಬಾಳಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡದ ʼಮುದ್ದುಲಕ್ಷ್ಮೀʼ ಸೇರಿದಂತೆ ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಲೋಕದಲ್ಲಿ ಗಮನ ಸೆಳೆದಿರುವ ಚರಿತ್ ಬಾಳಪ್ಪ ವಿರುದ್ಧ ಲೈಂಗಿಕ ಕಿರುಕುಳ ಆರೋಪ, ಹಣಕ್ಕೆ ಬೇಡಿಕೆ ಆರೋಪ ಕೇಳಿಬಂದ ಹಿನ್ನೆಲೆ ಅವರನ್ನು ಆರ್ಆರ್ ನಗರ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಪ್ರೀತಿಸುವ ನಾಟಕವಾಡಿ ಪರಿಚಯವಿರುವ ಗೆಳತಿಗೆ ಚರಿತ್ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಯುವತಿ ವಾಸಿಸುತ್ತಿದ್ದ ಮನೆಗೆ ನುಗ್ಗಿ ಚರಿತ್ ಕಿರುಕುಳ ನೀಡಿದ್ದಾನೆ, ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದರೆ ಖಾಸಗಿ ವಿಡಿಯೋ, ಫೋಟೋಗಳನ್ನು ಹರಿಬಿಡುವ ಬೆದರಿಕೆಯನ್ನು ಚರಿತ್ ಹಾಕಿದ್ದಾನೆ ಎಂದು ದೂರಿನಲ್ಲಿ ಯುವತಿ ಹೇಳಿದ್ದಾಳೆ.
ಚರಿತ್ ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದಿದ್ದಾರೆ. ವಿಚ್ಛೇದನ ಪರಿಹಾರ ಹಣಕ್ಕೆ ನೋಟಿಸ್ ಕಳುಹಿಸಿದ್ದಕ್ಕೆ ಮಾಜಿ ಪತ್ನಿಗೆ ಚರಿತ್ ಬೆದರಿಕೆ ಹಾಕಿದ್ದರು, ಈ ಹಿನ್ನೆಲೆಯಲ್ಲಿಅವರ ವಿರುದ್ಧ ಅವರ ಮಾಜಿ ಪತ್ನಿಯೂ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.