ಕಲಬುರಗಿ, ಫೆ 6 : ಕಲ್ಯಾಣ ಕರ್ನಾಟಕವನ್ನು ಎಲ್ಲರೂ ಒಗ್ಗೂಡಿ ಅಭಿವೃದ್ಧಿ ಮಾಡಬೇಕು ಎಂದು ಕೇಂದ್ರ ಮಾಜಿ ಸಚಿವರಾದ ಡಾ.ಮಲ್ಲಿಕಾರ್ಜುನ್‍ಖರ್ಗೆ ಅಭಿಪ್ರಾಯ ಪಟ್ಟರು.
ಗುಲ್ಬರ್ಗಾ ವಿವಿ ಆವರಣದಲ್ಲಿ ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ನಡೆದ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ 2ನೇ ದಿನದ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಅಭಿವೃದ್ಧಿಯನ್ನು ನಾವೆಲ್ಲರೂ ಸೇರಿ ಮಾಡಬೇಕು. ಕೇವಲ ಟೀಕೆಗಳನ್ನು ಮಾಡುತ್ತಿದ್ದರೇ, ಅಭಿವೃದ್ಧಿ ಆಗಲು ಸಾಧ್ಯವಿಲ್ಲ ಎಂದರು.
ರಾಜ್ಯಏಕೀಕರಣಗೊಂಡು 6 ದಶಕಗಲೇ ಕಳೆದರೂ ಈ ಭಾಗ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಆಯವ್ಯಯದಲ್ಲಿ ಈ ಭಾಗಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಮೂಲಕ ಇಲ್ಲಿನವರಿಗೆ ಏಕೀಕರಣದ ಲಾಭ ಪಡೆಯಲು ಅವಕಾಶ ಮಾಡಿಕೊಡಬೇಕು. ಅಲ್ಲದೇ, ರಾಜ್ಯದ ನಾಲ್ಕು ಭಾಗಗಳು ಸಮಾನವಾಗಿ ಅಭಿವೃದ್ಧಿಯಾಗಬೇಕಾಗಿದೆ.
ಹೀಗಾಗಿ ಸರ್ವರಿಗೂ ಸಮಾನತೆ ಸಾರಿದ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಿಂದಲೇ ಅನುದಾನ ಹಂಚಿಕೆ ಪ್ರಾರಂಭವಾಗಲಿ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ಮೀಸಲಾತಿ ದೊರಕಿದ್ದು, ಈ ಭಾಗದ ಎಲ್ಲರಿಗೂ ಒಂದಲ್ಲ ಒಂದು ರೀತಿ ಅನುಕೂಲವಾದಂತಾಗಿದೆ ಎಂದ ಅವರು ಪ್ರಜಾಪ್ರಭುತ್ವ ದೇಶಕ್ಕೆ ಸಂವಿಧಾನ ಪರಮೋಚ್ಛ ಗ್ರಂಥ. ಆದ್ದರಿಂದ ಸಾಹಿತಿಗಳು, ಬರಹಗಾರರು ಸೂಕ್ಷ್ಮ ಪ್ರಜ್ಞೆಯುಳ್ಳವರಾಗಿದ್ದು, ಪ್ರಜಾಪ್ರಭುತ್ವಕ್ಕೆ ಕುಂದು ಬರುವ ಘಟನೆಗಳು ನಡೆದಲ್ಲಿ ಯಾವುದೇ ಮುಲಾಜಿಲ್ಲದೇ ವಿರೋಧಿಸುವ ಮೂಲಕ ಪ್ರಜಾಪ್ರಭುತ್ವ ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ವಿವಿಧಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಾದ
ಡಾ.ತೇಜಸ್ವಿ ಅನಂತಕುಮಾರ್, ಡಾ. ಶಾಮನೂರ ಶಿವಶಂಕರಪ್ಪ, ರವಿ ಹೆಗಡೆ, ಅಭಿನಯ, ಪ್ರದೀಪ್ ಶೆಟ್ಟಿ, ಡಾ.ಚನ್ನವೀರ ಶಿವಚಾರ್ಯರು, ಶ್ರೀನಿವಾಸ ಶರ್ಮಾ, ಅಬೂಬಕ್ಕರ್ ಮಂಟಗೋಳಿ, ಶಿವಾನಂದ ತಗಡೂರ, ಎಲ್.ಮುತ್ತುರಾಜ್, ಸೇರಿದಂತೆ ಅನೇಕ ಸಾಧಕರಿಗೆ ಸನ್ಮಾನಿಸಲಾಯಿತು.