ಧಾರವಾಡ 31: ಬರುವ ಆಗಸ್ಟ್ 15 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಆಚರಿಸುವ ಸ್ವಾತಂತ್ರ್ಯೋತ್ಸವದ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಇಲಾಖಾವಾರು ವಹಿಸಿರುವ ಕಾರ್ಯಗಳನ್ನು ಲೋಪ ಉಂಟಾಗದಂತೆ ಅಧಿಕಾರಿಗಳು ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ ರಾಷ್ಟ್ರಧ್ವಜಾರೋಹಣ ನೆರವೇರುವುದು. ನಂತರ ಅತಿಥಿಗಳು ಗೌರವರಕ್ಷೆ ಸ್ವೀಕರಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವರು. ಅದಕ್ಕೂ ಮುನ್ನ ಬೆಳಿಗ್ಗೆ 7:30ಕ್ಕೆ ಎಲ್ಲಾ ಶಾಲಾಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜಾರೋಹಣ ನೇರವೇರಿಸಿ,ಬೆಳಿಗ್ಗೆ 8.30 ಕ್ಕೆ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲಾ ಅಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು,ಶಿಕ್ಷಕರು ಹಾಜರಿರಬೇಕು ಎಂದು ತಿಳಿಸಿದರು.
ಸ್ವಾತಂತ್ರ್ಯ ದಿನದ ಮುನ್ನಾದಿನವಾದ ಆಗಸ್ಟ್ 14 ರಂದು ಪ್ರಮುಖ ಸರಕಾರಿ ಕಟ್ಟಡಗಳು ಹಾಗೂ ಅವಳಿನಗರದ ಪ್ರಮುಖ ವೃತ್ತಗಳನ್ನು ಸ್ವಚ್ಚಗೊಳಿಸಿ ದೀಪಾಲಂಕಾರದೊಂದಿಗೆ ಶೃಂಗರಿಸಬೇಕು. ಜಿಲ್ಲಾ ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ಸೇರಿದಂತೆ ಎಲ್ಲ ಅತಿಥಿಗಳಿಗೆ ಆಸನ, ಕುಡಿಯುವ ನೀರು ವ್ಯವಸ್ಥೆ ಮಾಡಬೇಕು.ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆಗೆ ವಿವಿಧ ಶಾಲಾ ಕಾಲೇಜು ಮಕ್ಕಳು ಆಗಮಿಸುವುದರಿಂದ ಅವರಿಗೆ ಬರಲು ಅನುಕೂಲವಾಗುವಂತೆ ರಸ್ತೆ ಪಕ್ಕದಲ್ಲಿ ಸಂಚಾರಿ ಪೊಲೀಸರನ್ನು ನೇಮಿಸಿ, ಸಂಚಾರ ದಟ್ಟಣೆ ಆಗದಂತೆ ಮತ್ತು ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಮಹನೀಯರನ್ನು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಗುವುದು. ಪಿ.ಯು.ಸಿ ಓದುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸರಕಾರದ ಯೋಜನೆಯಡಿ ಉಚಿತವಾಗಿ ಲ್ಯಾಪ್ಟಾಪ್ ವಿತರಿಸಲಾಗುವುದು ಎಂದು ಅವರು ಹೇಳಿದರು.
ಸಂಜೆ 5 ಗಂಟೆಗೆ ಡಾ.ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಶಾಲಾ ಕಾಲೇಜು ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು.ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ಯ ಇಲಾಖಾವಾರು ನಿರ್ವಹಿಸಬೇಕಾದ ಕಾರ್ಯಗಳನ್ನು ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಮುಖ ವೃತ್ತಗಳ ಸ್ವಚ್ಚತೆ,ದೀಪಾಲಂಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಕಲಾಭವನ ಸಿದ್ಧಪಡಿಸುವದಾಗಿ ಹೇಳಿದರು.
ಸಭೆಯಲ್ಲಿ ಪರೀಕ್ಷಾರ್ಥ ಐ.ಎ.ಎಸ್ ಅಧಿಕಾರಿ ಆಕೃತಿ ಬನ್ಸಾಲ್, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ , ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಎಸ್.ಜಿ.ಕೊರವರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.