ಎಲ್ಲ ಲಿಂಗಾಯತ ಸಂಘಟನೆಗಳೂ ಒಂದಾಗಿ ಬಸವ ಜಯಂತಿ ಆಚರಣೆ: ಸಚಿವೆ ಹೆಬ್ಬಾಳಕರ್
ಬೆಳಗಾವಿ 05: ಎಲ್ಲ ಲಿಂಗಾಯತ ಸಂಘಟನೆಗಳೂ ಜಾಗೃತರಾಗಿದ್ದು, ಎಲ್ಲ ನೂರಾ ಮೂರು ಒಳಪಂಗಡಗಳೂ ಸೇರಿ ಈ ಬಾರಿ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ವಿಶ್ವಗುರು ಬಸವೇಶ್ವರರ ಜಯಂತಿ ನಿಮಿತ್ತ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಎಲ್ಲರೂ ಜಾಗೃತಿ ಆಗೋಣ ಎಂದು ಈ ಬಾರಿ ರಾಜ್ಯದಲ್ಲಿ ವಿಶೇಷವಾಗಿ ಬಸವ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಈ ಸಂಬಂಧ ವೀರಶೈವ ಲಿಂಗಾಯತ ಸಂಘಟನೆಗಳು 2 -3 ಬಾರಿ ಸಭೆ ಮಾಡಿದ್ದವು. ಬೀದರಿ್ನಂದ ಚಾಮರಾಜನಗರವರೆಗೂ, ಕಲಬುರಗಿಯಿಂದ ಬೆಳಗಾವಿಯವರೆಗೂ ಈ ಬಾರಿ ವಿಶೇಷವಾಗಿ ಬಸವ ಜಯಂತಿ ಆಚರಣೆ ಮಾಡಲಾಗುತ್ತಿದೆ. ವೀರಶೈವ ಲಿಂಗಾಯತ ಸಮಾಜದ ಎಲ್ಲಾ 103 ಒಳಪಂಗಡಗಳು ಸೇರಿ ಜನಜಾಗೃತಿ ಮಾಡಲು ಈ ಬಾರಿ ಒಟ್ಟಾಗಿ ಬಸವ ಜಯಂತಿ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು.
ನಮ್ಮ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಈಗಾಗಲೆ ಘೋಷಣೆ ಮಾಡಿದೆ. ಈ ಬಾರಿ ಎಲ್ಲರೂ ಸೇರಿ ಅದ್ಧೂರಿಯಾಗಿ ಬಸವ ಜಯಂತಿ ಮೆರವಣಿಗೆ ಮಾಡಲು ಕರೆ ಕೊಡಲಾಗಿತ್ತು. ಎಲ್ಲರೂ ಸಹ ಪಕ್ಷಾತೀತವಾಗಿ, ನಮ್ಮ ಕ್ಷೇತ್ರದ, ನಮ್ಮ ನಮ್ಮ ಸಮಾಜದ ಜನರ ಜಾಗೃತಿ ಮಾಡುವ ಕೆಲಸ ಮಾಡಿದ್ದೇವೆ. ನಮ್ಮ ಸಮಾಜದ ಬಾಂಧವರು ಅಷ್ಟೇ ಅಲ್ಲ, ಬೇರೆ ಸಮಾಜ ಬಾಂಧವರು ಸಹ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಬಸವಣ್ಣ ಅಂದ್ರೆ ಸಮಾನತೆ, ಜಾತ್ಯತೀತ ನಾಯಕ, ಸಮಾನತೆಯ ಹರಿಕಾರ. ಎಲ್ಲರೂ ಸಹ ಇಂದು ಮೆರವಣಿಗೆಯಲ್ಲಿ ಭಾಗಿಯಾಗಿದ್ದನ್ನು ನೋಡಿದ್ರೆ ತುಂಬಾ ಸಂತೋಷ ಆಗುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬಸವ ಜಯಂತಿ ನಿಮಿತ್ತ ಚನ್ನಮ್ಮ ವೃತ್ತದಿಂದ ಅದ್ಧೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಹಿಳೆಯರ ಜೊತೆ ಸ್ಟೆಪ್ಸ್ ಕೂಡ ಹಾಕಿದರು.