ಲಕ್ನೋ: ಪುಲ್ವಾಮಾ ದಾಳಿ ಕುರಿತ ಚಿಕ್ಕಪ್ಪನ ಹೇಳಿಕೆ ಸಮರ್ಥಿಸಿದ ಅಖಿಲೇಶ್ ಯಾದವ್

  ಲಕ್ನೋ, ಮಾರ್ಚ್ 22- ಪುಲ್ವಮಾ ಭಯೋತ್ಪಾದಕ ದಾಳಿಯ ಹಿಂದೆ ರಾಜಕೀಯ ಸಂಚು ಅಡಗಿದೆ ಎಂದು ಆರೋಪಿಸಿ ತಮ್ಮ ಚಿಕ್ಕಪ್ಪ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೊ. ರಾಮ್ ಗೋಪಾಲ್ ಯಾದವ್  ಅವರು ನೀಡಿದ್ದ ಹೇಳಿಕೆಯನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶುಕ್ರವಾರ ಬಲವಾಗಿ ಸಮರ್ಧಿಸಿಕೊಂಡಿದ್ದಾರೆ.

  ಇಟಾವದಲ್ಲಿ  ಗುರುವಾರ ಹೋಳಿ ಆಚರಣೆಯ ವೇಳೆ, ಪ್ರೊ. ರಾಮ್ ಗೋಪಾಲ್ ಯಾದವ್,  ಕೇಂದ್ರದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದರೆ, ಪುಲ್ವಮಾ ಭಯೋತ್ಪಾದಕ ದಾಳಿ ಘಟನೆಯ ಕುರಿತು ತನಿಖೆ ನಡೆಸಲಿದೆ ಎಂದು ಹೇಳಿದ್ದರು.

  ನಮ್ಮ ಸಶಸ್ತ್ರ ಪಡೆಗಳ ತ್ಯಾಗ ಬಲಿದಾನವನ್ನು ಎಂದಿಗೂ ನಾವು  ಪ್ರಶ್ನಿಸಬಾರದು, ಆದರೆ ನಮ್ಮ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಅಖಿಲೇಶ್ ಯಾದವ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

 ಭಾರತೀಯ ಸೇನೆಯಂತೆ  ಈ ಸರ್ಕಾರ ನಟಿಸುವುದನ್ನು  ಮೊದಲು ನಿಲ್ಲಿಸಬೇಕಾದ  ಅಗತ್ಯವಿದೆ.ನಮ್ಮನ್ನು ಪ್ರಶ್ನಿಸಬಾರದು ಎಂದು ಹೇಳುವ ರಾಜಕಾರಣಿಗಳು ತೀವ್ರ ಆಪಾಯಕಾರಿ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಅಖಿಲೇಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಆದರೆ,   ಪುಲ್ವಮಾ ದಾಳಿ ಕುರಿತ  ಸಮಾಜವಾದಿ ನಾಯಕ ರಾಮ್ ಗೋಪಾಲ್ ಯಾದವ್ ಅವರು ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸಬೇಕು. ಹೇಳಿಕೆ ದೇಶದ  ಸೇನಾ ಪಡೆಗಳಿಗೆ ಮಾಡಿದ ಅಪಮಾನ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್  ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಪ್ರೊ. ರಾಮ್ ಗೋಪಾಲ್ ಯಾದವ್, ತಮ್ಮ ತವರು ಸಪಾಯಿಯಲ್ಲಿ  ಹೋಳಿ ಆಚರಣೆಯ ವೇಳೆ, ಪುಲ್ವಾಮಾ ದಾಳಿಯಲ್ಲಿ  ಸರ್ಕಾರದ ಪಾತ್ರ ಕುರಿತು ಭದ್ರತಾಪಡೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಸರ್ಕಾರದ ಬೇಜವಬ್ದಾರಿಯಿಂದಾಗಿ   ಯೋಧರ  ಅಮೂಲ್ಯ ಜೀವಗಳಿಗೆ ಎರವಾಯಿತು ಎಂದು ಅವರು ದೂರಿದ್ದರು.