ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಇಂದು ಅಜಿತ್ ದೋವಲ್ ಭೇಟಿ

ನವದೆಹಲಿ, ಫೆ 26 :   ಈಶಾನ್ಯ ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಬುಧವಾರ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಹಿರಿಯ ಭದ್ರತಾ ಅಧಿಕಾರಿ ಇಲ್ಲಿ ತಿಳಿಸಿದ್ದಾರೆ.  

ಪೌರತ್ವ ತಿದ್ದುಪಡಿ ಕಾಯ್ದೆ ವಿಷಯ ಕುರಿತು ಭಾನುವಾರದಿಂದ ನಡೆಯುತ್ತಿರುವ ಹಿಂಸಾಚಾರಗಳು ದೆಹಲಿ ಪೊಲೀಸ್ ಸಿಬ್ಬಂದಿ ರತನ್ ಲಾಲ್ ಸೇರಿದಂತೆ 20 ಜನರನ್ನು ಬಲಿ ತೆಗೆದುಕೊಂಡಿವೆ. ಘರ್ಷಣೆಗಳಲ್ಲಿ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  

ದೋವಲ್ ಅವರು ಮಂಗಳವಾರ ತಡರಾತ್ರಿ ಈಶಾನ್ಯ ದೆಹಲಿಯ ಅನೇಕ ಭಾಗಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು.  

ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿದ ದೋವಲ್ ಅವರು, ಎಲ್ಲ ಸಮುದಾಯಗಳೊಂದಿಗೆ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.  

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ಮತ್ತು ವಿರೋಧಿ ಪ್ರತಿಭಟನಾಕಾರರು ಘರ್ಷಣೆಗಳಲ್ಲಿ ತೊಡಗಿದ್ದರಿಂದ ಈಶಾನ್ಯ ಜಿಲ್ಲೆಯ ಕೆಲ ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು.  

ರಾಷ್ಟ್ರ ರಾಜಧಾನಿಯಲ್ಲಿನ ಹಿಂಸಾಚಾರದ ಬಗ್ಗೆ ಚರ್ಚಿಸಲು ಭದ್ರತೆ ಕುರಿತ ಸಚಿವ ಸಂಪುಟ ಸಮಿತಿ ಇಂದು ಸಭೆ ಸೇರಲಿದೆ.