ಕಾರವಾರ ಅಂಕೋಲ ಅಲಗೇರಿ ಬಳಿ ವಿಮಾನ ನಿಲ್ದಾಣ ನಿರ್ಮಾಣ ಖಚಿತ - ಸಕ್ಕರೆ ಸಚಿವ ಹೆಬ್ಬಾರ್

Independnes day at karwar

74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ


ಜಿಲ್ಲೆಯ ವಿಮಾನ ನಿಲ್ದಾಣಕ್ಕೆ 200 ಕೋಟಿ ರೂ. ಯೋಜನಾ ವರದಿ ಸಿದ್ದ: ಸಚಿವ ಹೆಬ್ಬಾರ


ಕಾರವಾರ : ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ 200 ಕೋಟಿ ವೆಚ್ಚದ ವಿಮಾನ ನಿಲ್ದಾಣಕ್ಕೆ ಯೋಜನಾ ವರದಿ ಸಿದ್ದಗೊಂಡಿದೆ ಎಂದು ಸಕ್ಕರೆ, ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಹೇಳಿದರು. 


ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ದ್ವಜಾರೋಹಣ ನೆರವೇರಿಸಿ, ಜಿಲ್ಲೆಯ ಜನತೆಗೆ ಸಂದೇಶ ನೀಡಿ, ಜಿಲ್ಲೆಯ ಅಭಿವೃಧ್ಧಿಗೆ ವಿಮಾನ ನಿಲ್ದಾಣ   ಅವಶ್ಯಕತೆ ಇರುವುದನ್ನು ಮನಗಂಡು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಾಗ ಮಾನ್ಯ ಸರ್ಕಾರವು ಅಂಕೋಲಾ ತಾಲೂಕಿನ ಅಲಗೇರಿಯ ಹತ್ತಿರ ವಿಮಾನ ನಿಲ್ದಾಣವನ್ನ ನೌಕಾನೆಲೆಯ ಸಹಯೋಗದೊಂದಿಗೆ ನಿರ್ಮಾಣ ಮಾಡಲು ಸಚಿವ ಸಂಪುಟ ಅನುಮೋದನೆಯನ್ನು ನೀಡಿದ್ದು, ರಾಜ್ಯ ಸರ್ಕಾರವು ರೂ.200 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ಒಪ್ಪಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದರು.  


ಅಲ್ಲದೇ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ವಿಶೇಷ ಆರ್ಥಿಕ ವಲಯವನ್ನಾಗಿ ಗುರುತಿಸಲು ಕ್ರಮಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿಯೇ ಅತ್ಯಂತ ಹೆಚ್ಚು ಪ್ರವಾಸೋದ್ಯಮ ತಾಣಗಳನ್ನ ಹೊಂದಿರುವ ಜಿಲ್ಲೆ ನಮ್ಮದಾಗಿದ್ದು, ಮುರ್ಡೇಶ್ವರ, ಅಪ್ಸರಕೊಂಡ, ಯಾಣ, ಓಂ ಬಿಚ್, ಸಿದ್ದಾಪುರ ಕಲ್ಲಿನ ಸೇತುವೆ, ಪ್ರಸಿದ್ದ ಜಲಪಾತಗಳಾದ ಮಾಗೋಡ, ಸಾತ್ತೋಡ್ಡಿ, ಶಿರಲೆ, ಉಂಚಳ್ಳಿ, ಇನ್ನಿತರೇ ಪ್ರವಾಸಿ ತಾಣಗಳ ಬಗ್ಗೆ ವಿಷೇಶ ಕಾಳಜಿವಹಿಸಿ ಅಭಿವೃದ್ಧಿ  ಪಡಿಸುವ ಗುರಿಯನ್ನ ಹೊಂದಲಾಗಿದೆ.


ನಮ್ಮ ಸುದೈವಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಘನಾಶಿನಿ, ಶರಾವತಿ, ಕಾಳಿ, ಗಂಗಾವಳಿ, ಬೇಡ್ತಿ ನದಿಗಳ ಸದುಪಯೋಗವನ್ನು ನೀರಾವರಿ ಕ್ಷೇತ್ರಕ್ಕೆ ಬಳಸಿಕೊಳ್ಳಲು ನಮ್ಮ ಸರಕಾರ ವಿಶೇಷವಾಗಿ ಆದ್ಯತೆಯನ್ನು ನೀಡುತ್ತಿದೆ. ಈ ಮೂಲಕ ರೈತರ ಬದುಕನ್ನು ಹಸನಾಗಿಸುವ ಗುರಿಯನ್ನು ಹೊಂದಿದೆ.


 ಸಾಗರಮಾಲಾ ಯೋಜನೆ ಬಗ್ಗೆ ಮೀನುಗಾರರ ಜೊತೆ ಚರ್ಚಿಸಿ ವಿವಾದಗಳನ್ನು ಬಗೆಹರಿಸಲು ಸರ್ಕಾರ ಸಿದ್ದವಿದೆ. ಮತ್ತು ಸಾಗರಮಾಲಾ ಯೋಜನೆಯಿಂದ ಯಾವುದೇ ಮೀನುಗಾರರಿಗೆ ದಕ್ಕೆಯಿರುವುದಿಲ್ಲ. ಮತ್ತು ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಬಗ್ಗೆ ಯಾವುದೇ ಕಾರಣಕ್ಕು ಕೂಡಾ ಉತ್ತರ ಕನ್ನಡ ಜಿಲ್ಲೆ ಮತ್ತು ಉತ್ತರ ಕರ್ನಾಟಕದ ಬೆಸುಗೆಯ ವಿಷಯದಲ್ಲಿ ಪರಿಸರವಾದಿಗಳು ಅನಗತ್ಯವಾಗಿ ತೊಂದರೆ ಕೊಡುವುದರಿಂದ ಜಿಲ್ಲೆಯ ಅಭಿವೃದ್ಧಿ ಮೇಲೆ ಮಾರಕವಾದ ಪರಿಣಾಮವಾಗಲಿದೆ. 


ಆದ್ದರಿಂದ ಪರಿಸರವಾದಿಗಳಿಗೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವನಾಗಿ ವಿನಂತಿ ಮಾಡುವುದೆನೆಂದರೆ ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕಕ್ಕೆ ಸರ್ವಾಂಗೀಣ ಪ್ರಗತಿ ನಮ್ಮ ಆದ್ಯತೆ ಆಗಿದೆ ಆದ್ದರಿಂದ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಹಾಗೂ ಪರಿಸರವಾದಿಗಳು ಈ ಜಿಲ್ಲೆಯ ಸರ್ವಾಂಗೀಣ ಪ್ರಗತಿಯ ಬಗ್ಗೆ ಸರ್ಕಾರದ ಜೊತೆ ಕೈಜೋಡಿಸಲು ವಿನಂತಿಸುತ್ತೇನೆ.


    1978 ಕೇಂದ್ರ ಸರಕಾರ ನಿಗದಿಪಡಿಸಿದ 78 ರ ಪೂರ್ವದ ಆಸ್ತಿ ಮಂಜೂರಿಸುವುದು ಮತ್ತು ಹಂಗಾಮಿ ಲಾಗಣಿದಾರರ ಹಕ್ಕನ್ನು ಖಾಯಂ ಲಾಗಣಿದಾರರಾಗಿ ಪರಿವರ್ತಿಸುವುದು, ಅರಣ್ಯ ಇಲಾಖೆಯಿಂದ ಜಿ.ಪಿ.ಎಸ್ ಆದ ಹಕ್ಕುದಾರರಿಗೆ ಅಧಿಕೃತ ಹಕ್ಕನ್ನು ನೀಡುವ ಕುರಿತು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಮ್ಮ ಸರ್ಕಾರ ಅತೀ ಶೀಘ್ರದಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. 


ನಮ್ಮ ಕಾರ್ಮಿಕ ಇಲಾಖೆಯು ಇಂತ ಕ್ಲೀಷ್ಟಕರ ಪರಿಸ್ಥಿತಿಯಲ್ಲಿ ಕಾರ್ಮಿಕರ ಮತ್ತು ಮಾಲೀಕರ ನಡುವೆ ಸೇತುವೆಯಾಗಿ, ಮಾಲೀಕರ ಮತ್ತು ಕಾರ್ಮಿಕರ ಹಿತ ರಕ್ಷಣೆ ಮಾಡುವ ಮೂಲಕ ಕಾರ್ಖಾನೆಗಳ ಬದುಕನ್ನು ಮತ್ತು ಕಾರ್ಮಿಕ ರಕ್ಷಣೆಯನ್ನ ಯೋಚಿಸಿ ಇಬ್ಬರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಡಲು ಹೋಗಲು ನನ್ನ ಇಲಾಖೆ ಬದ್ದವಾಗಿದೆ. 

 

ಜಿಲ್ಲೆಯ ಅನೇಕ ಪಟ್ಟಣಗಳಲ್ಲಿ ನೀರಾವರಿ ಮತ್ತು ಒಳ ಚರಂಡಿ ಯೋಜನೆಯ ಸುಮಾರು ಸಾವಿರ ಕೋಟಿಗಿಂತ ಜಾಸ್ತಿ ಕಾರ್ಯಕ್ರಮವನ್ನ ರೂಪಿಸಿ ಕೆಲಸ ಆರಂಭಿಸಲಾಗುತ್ತಿದೆ. ಕಾರವಾರ, ಹೊನ್ನಾವರ, ಕುಮಟಾ, ಭಟ್ಕಳ, ಜಾಲಿ, ಹಳಿಯಾಳ, ದಾಂಡೇಲಿ, ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಮುಂಡಗೋಡ ಈ ಎಲ್ಲಾ ಸ್ಥಳಗಳು ಒಳಗೊಂಡಿವೆ. 


ಮುಂಡಗೋಡ, ಬನವಾಸಿ ಮತ್ತು ಹಳಿಯಾಳದಲ್ಲಿ ಸುಮಾರು ರೂ.800 ಕೋಟಿಗಿಂತ ಜಾಸ್ತಿ ಅನುದಾನದಲ್ಲಿ ಕೆರೆ ನೀರು ತುಂಬಿಸುವ ಯೋಜನೆಯ ಮೂಲಕ 75 ಸಾವಿರ ಏಕರೆಗಿಂತ ಹೆಚ್ಚಿನ ಪ್ರದೇಶಗಳಿಗೆ ನೀರಾವರಿಯ ಅನುಕೂಲತೆಯನ್ನು ಮಾಡಿ ದೇಶಕ್ಕೆ ಅನ್ನ ನೀಡುವ ಅನ್ನದಾತರಿಗೆ ಸಮೃದ್ಧಿ ಜೀವನವನ್ನ ರೂಪಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. 


ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ ಸುಮಾರು 145 ಕಿ.ಮೀ ವಿಶಾಲತೆಯನ್ನ ಹೊಂದಿದ್ದು, ಈ ಜಿಲ್ಲೆಯ ಮೀನುಗಾರಿಕೆ ಮತ್ತು ಬಂದರುಗಳ ಅಭಿವೃದ್ಧಿ ಪಡಿಸಲು ವಿಷೇಶ ಪ್ರಯತ್ನ ಮಾಡಲು ಉದ್ದೇಶಿಸಲಾಗಿದೆ. 


ಬಂದರು ಪ್ರದೇಶಗಳಾದ ಬೇಲೆಕೇರಿ, ಕಾರವಾರ, ಹೊನ್ನಾವರ ಬಂದರುಗಳನ್ನು ಪಿಪಿಪಿ ಆಧಾರದ ಮೇಲೆ ಅಭಿವೃದ್ಧಿ ಪಡಿಸಿ ಮೀನುಗಾರಿಕೆಯನ್ನ ಔದ್ಯೋಗಿಕವಾಗಿ ಅಭಿವೃದ್ಧಿ ಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಮಾಜಾಳಿ, ಬೆಳಂಬರ ಮತ್ತು ಕೇಣಿಯಲ್ಲಿ ಸಮಗ್ರ ಮೀನುಗಾರಿಕಾ ಬಂದರುಗಳನ್ನು ಅಭಿವೃದ್ಧಿ ಪಡಿಸಲು ಯೋಚಿಸಲಾಗಿದೆ ಎಂದು ಹೇಳಿದರು. 


ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಶಾಲಾ ಶಿಕ್ಷಕಿಯರು ನಾಡಗೀತೆ ನಡೆಸಿಕೊಟ್ಟರೆ, ಪೊಲೀಸ್, ಅರಣ್ಯ, ಅಗ್ನಿಶಾಮಕ ಹಾಗೂ ಅಬಕಾರಿ ಇಲಾಖೆಯ ನಾಲ್ಕು ತಂಡಗಳು ಮಾತ್ರ ಪಥಸಂಚಲನದಲ್ಲಿ ಭಾಗವಹಿಸಿದವು.


ಕೊರೋನಾ ವಾರಿಯರ್ಸಗೆ ಸನ್ಮಾನ: ಜಿಲ್ಲೆಯಲ್ಲಿ ಕೋವಿಡ್-19 ಸಂದರ್ಭದಲ್ಲಿ ವಾರಿಯರ್ಸ ಆಗಿ ಉತ್ತಮ ಕಾರ್ಯನಿರ್ವಹಿಸಿದ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. .


ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೋಗೆರ, ತಾಲೂಕ ಪಂಚಾಯತ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ, ಎಸಿ ಪ್ರಿಯಾಂಗಾ ಎಂ ಸೇರಿದಂತೆ ಇತರರು ಉಪಸ್ಥಿತರಿದ್ದರು.


                 *********************