ಬೆಂಗಳೂರು, ಮೇ 14, ಕೃಷಿ ವಿಶ್ವವಿದ್ಯಾಲಯಗಳು ಕೃಷಿ ಇಲಾಖೆಗೆ ತಾಯಿ ಇದ್ದಂತೆ. ಕೃಷಿ ವಿಶ್ವವಿದ್ಯಾಲಯಗಳು ರೈತರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿ ಕೃಷಿ ಇಲಾಖೆಗೆ ಮಾರ್ಗದರ್ಶನ ನೀಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.ವಿಕಾಸಸೌಧದಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಸಮನ್ವಯ ಸಮಿತಿ ಸಭೆ ನಡೆಸಿದ ಅವರು, ಸಭೆಗಳಲ್ಲಿ ತೆಗೆದುಕೊಂಡ ತೀರ್ಮಾನಗಳು ಕಡತದಲ್ಲಿ ಉಳಿಯದೇ ಕಾರ್ಯರೂಪಕ್ಕೆ ಬರಬೇಕು. ಸಭೆಗಳು ಸರ್ಕಾರಿ ಭತ್ಯೆ, ಸೌಲಭ್ಯಗಳನ್ನು ಪಡೆಯುವುದಕ್ಕೆ ಮಾತ್ರ ಸೀಮಿತವಾಗಬಾರದು. ರೈತರಿಗೆ ಅನುಕೂಲ ಕಲ್ಪಿಸಲು ಹಾಗೂ ವಿದ್ಯಾರ್ಥಿಗಳಿಗೆ ಕೃಷಿಯತ್ತ ಹೊಸ ಕಲಿಕೆಗೆ ಅವಕಾಶ ಮಾಡಿಕೊಡಲು ಸಹಕಾರಿಯಾಗಬೇಕು ಎಂದರು.
ವಿಶ್ವವಿದ್ಯಾಲಯಗಳಲ್ಲಿ ಹೊಸತನ್ನು ಕಲಿಯಲು ಮತ್ತು ಕಲಿಸಲು ರೈತರಿಗೆ ಎಲ್ಲಾ ರೀತಿಯಲ್ಲಿ ಅನುಕೂಲ ಕಲ್ಪಿಸುವಂತಹ ಹೊಸಸಂಶೋಧನೆಗಳನ್ನು ಮಾಡಬೇಕು. ಹೊಸ ತಳಿಗಳನ್ನು ಕಂಡುಹಿಡಿಯಬೇಕು. “ಯಾವ ಕಾಯಿಲೆಗೆ ಯಾವ ಮದ್ದು” ಎನ್ನುವುದು ವೈದ್ಯರಿಗೆ ಹೇಗೆ ತಿಳಿದಿರುತ್ತದೆಯೋ ಅದೇ ರೀತಿ ರೈತರ ಬೆಳೆಯ ಸಮಸ್ಯೆಗಳಿಗೆ ಕೃಷಿವಿಶ್ವವಿದ್ಯಾಲಯಗಳು ಪರಿಹಾರ ಸೂಚಿಸಬೇಕು. ಪ್ರತಿಯೊಬ್ಬ ವಿಜ್ಞಾನಿ, ತಜ್ಞರು ರೈತರ ಭೂಮಿಗಿಳಿದು ಸಲಹೆ ಸೂಚನೆ ನೀಡಬೇಕು. ಹಿಂದಿನ ಕಾಲದ ಬೇಸಾಯದ ಪದ್ಧತಿಗೂ ಈಗಿನ ಪದ್ಧತಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಕಾಲಕ್ಕೆ ತಕ್ಕ ಬೆಳೆ ತಂತ್ರಜ್ಞಾನದ ಬಳಕೆ ಸಂಶೋಧನೆ ಬಗ್ಗೆ ವಿದ್ಯಾರ್ಥಿಗಳಿಗೆ ರೈತರಿಗೆ ನೇರವಾಗಿ ಮಾಹಿತಿ ದೊರೆಯುವಂತಹ ವ್ಯವಸ್ಥೆ ರೂಪಿಸಬೇಕು ಎಂದು ಹೇಳಿದರು.
ಹೊಸಹೊಸ ಸಂಶೋಧನೆಗಳು, ಹೊಸ ತಳಿಗಳ ಅನ್ವೇಷಣೆತ್ತ ಗಮನಹರಿಸಬೇಕು. ವಿಶ್ವವಿದ್ಯಾಲಯದ ಪ್ರಯೋಗಗಳು ರೈತರನ್ನು ತಲುಪಬೇಕು. ವಿಶ್ವವಿದ್ಯಾಲಯಗಳ ಸಾಧನೆ ಸಂಶೋಧನೆಗಳನ್ನು ಸಾಮಾಜಿಕ ಜಾಲತಾಣಗಳ ಕೃಷಿ ಸಮೂಹಕ್ಕೆ ತಲುಪಿಸಬೇಕು. ಸಭೆಗೆ ಯಾವುದೇ ಅಧಿಕಾರಿಗಳಾಗಲೀ ಕುಲಪತಿ ನಿರ್ದೇಶಕರು ಆಥವಾ ಯಾರೇ ಆಗಲೀ ಪೂರ್ವಮಾಹಿತಿ ದಾಖಲೆಯಿಲ್ಲದೇ ಬರಬಾರದು. ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ಇಲಾಖೆ ನಡುವೆ ಎಂದಿಗೂ ಸಮನ್ವಯದ ಕೊರತೆಯಾಗದಂತೆ ನೋಡಿಕೊಳ್ಳಬೇಕುಎಂದರು.
ಕೃಷಿ ವಿವಿಗಳು ರೈತರ ಜತೆ ಸಂವಾದ ಮಾಡುವ ಮೂಲಕ ರೈತರ ಸಮಸ್ಯೆಗಳನ್ನು ಹತ್ತಿರದಿಂದ ಅರಿತು ಅವುಗಳ ಪರಿಹಾರಕ್ಕೆ ಕ್ರಮವಹಿಸಬೇಕು. ಇನ್ನುಮುಂದೆ ಪ್ರತಿ ತಿಂಗಳಿಗೊಮ್ಮೆ ಸಮನ್ವಯ ಸಮಿತಿ ಸಭೆ ನಡೆಸಲಾಗುವುದು. ಮೇಲಿಂದ ಮೇಲೆ ಸಭೆಗಳನ್ನು ನಡೆಸುವುದರಿಂದ ವಿಷಯಗಳ ಮಾಹಿತಿ ವಿನಿಮಯ, ಕೆಲಸದ ಪ್ರಗತಿ ಬಗ್ಗೆ ಅರಿಯಲು ಹಾಗೂ ರೈತರಿಗಾಗಿ ಇನ್ನಷ್ಟು ದುಡಿಯಲು ಸಾಧ್ಯವಾಗುತ್ತದೆ ಎಂದರು.ಸಭೆಯಲ್ಲಿ ರಾಜ್ಯದ ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ಕೃಷಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ಸೇರಿದಂತೆ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.