ಬೆಳಗಾವಿಯಲ್ಲಿ ಆರ್‌ಎಸ್‌ಎಸ್ ವಾರ್ಷಿಕ ಸಭೆಗೆ ಚಾಲನೆ

ಬೆಳಗಾವಿಯಲ್ಲಿ ಆರ್‌ಎಸ್‌ಎಸ್ ವಾರ್ಷಿಕ ಸಭೆಗೆ ಚಾಲನೆ  RSS annual meeting begins in Belagavi

ಬೆಳಗಾವಿ 10: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆ ಶುಕ್ರವಾರ ಬೆಳಿಗ್ಗೆ ಬೆಳಗಾವಿಯ ಅನಗೋಳದ ಸಂತ ಮೀರಾ ಶಾಲೆಯಲ್ಲಿ ಆರಂಭವಾಯಿತು.  

ಸಭೆಯಲ್ಲಿ ಪೂಜ್ಯ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ಜಿ, ಸರ್ಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಜಿ, ಎಲ್ಲಾ ಸಹ ಸರ್ಕಾರ್ಯವಾಹರು, ಅಖಿಲ ಭಾರತೀಯ ಕಾರ್ಯವಿಭಾಗದ ಪ್ರಮುಖರು, ಸಹ ಪ್ರಮುಖರು, ಕಾರ್ಯಕಾರಿಣಿ ಸದಸ್ಯರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು ಹಾಗೂ ದೇಶದ 46 ಪ್ರಾಂತಗಳ ಪ್ರಾಂತ ಮತ್ತು ಸಹ ಪ್ರಾಂತ ಪ್ರಚಾರಕರು ಭಾಗವಹಿಸಿದ್ದಾರೆ. ಇದರೊಂದಿಗೆ ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳೂ ಸಭೆಯಲ್ಲಿ ಉಪಸ್ಥಿತರಿದ್ದಾರೆ.  

ಸಭೆಯಲ್ಲಿ ಮಾರ್ಚ್‌ 2026ರ ನಂತರ ಸಂಘದ ವಿವಿಧ ಹಂತಗಳಲ್ಲಿ ನಡೆದ ತರಬೇತಿ ವರ್ಗಗಳ ವರದಿ, ಶಾಖಾ ಮಟ್ಟದ ಕಾರ್ಯಯೋಜನೆಗಳ ಅನುಷ್ಠಾನ ಹಾಗೂ ಸಂಘಟನಾ ಚಟುವಟಿಕೆಗಳ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ.  ಸಂಘದ ಶತಾಬ್ದಿ ವರ್ಷದ ಅಂಗವಾಗಿ ಶಾಖಾ ಕಾರ್ಯ ವಿಸ್ತರಣೆಯ ಪರೀಶೀಲನೆ, ಈಗಾಗಲೇ ಕೈಗೊಂಡ ಕಾರ್ಯಕ್ರಮಗಳ ಅವಲೋಕನ ಹಾಗೂ ಮುಂಬರುವ ಕಾರ್ಯಕ್ರಮಗಳ ಯೋಜನೆ ಕುರಿತೂ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗುತ್ತಿದೆ.  

ಇದೇ ವೇಳೆ, ಮುಂಬರುವ ವರ್ಷದಲ್ಲಿ ಪೂಜ್ಯ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ಜಿಯವರ ಪ್ರವಾಸ ಯೋಜನೆ ಸೇರಿದಂತೆ ರಾಷ್ಟ್ರದ ಸಮಕಾಲೀನ ಮತ್ತು ಸಂಘಟನೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ.  ಸಂಘದ ಶತಾಬ್ದಿ ವರ್ಷವು 2026ರ ಅಕ್ಟೋಬರ್ 20ರವರೆಗೆ ಮುಂದುವರಿಯಲಿದ್ದು, ಈ ಅವಧಿಯಲ್ಲಿ ಹಮ್ಮಿಕೊಳ್ಳಲಿರುವ ಉಳಿದ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಕೂಡ ಸಭೆಯಲ್ಲಿ ಚರ್ಚೆ ನಡೆಯಲಿದೆ.