ಬೆಳಗಾವಿ ಸುವರ್ಣಸೌಧ,ಡಿ.13: ಮಂಗಳೂರು-ಮುಂಬೈ ನಡುವೆ ನಿರ್ಮಿಸಿರುವ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವೀಲೀನಗೊಳಿಸಲು ರಾಜ್ಯ ಸರ್ಕಾರದ ಸಂಪೂರ್ಣ ಸಹಮತವಿದ್ದು, ಈ ನಿಟ್ಟಿನಲ್ಲಿ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಹೇಳಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯ ಗಮನ ಸೆಳೆಯುವ ಸೂಚನೆಗಳಡಿ ಶಾಸಕರುಗಳಾದ ಕಿರಣ್ ಕುಮಾರ್ ಕೊಡ್ಗಿ ಮತ್ತು ವಿ. ಸುನೀಲ್‌ಕುಮಾರ್ ಅವರ ಗಮನ ಸೆಳೆಯುವ ಸೂಚನೆಗೆ ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರ ಪರವಾಗಿ ಉತ್ತರ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು, ಕೊಂಕಣ ರೈಲ್ವೆ ಈ ಹಿಂದೆಯೇ ಭಾರತೀಯ ರೈಲ್ವೆಯೊಂದಿಗೆ ವೀಲೀನವಾಗಬೇಕಿತ್ತು. ಆದರೆ ನಷ್ಟದಲ್ಲಿ ನಡೆಯುತ್ತಿರುವ ಕಾರಣ, ಈ ಭಾಗದ ಯಾವುದೇ ರೈಲ್ವೆ ನಿಲ್ದಾಣಗಳು ಕೂಡ ಅಭಿವೃದ್ಧಿಯಾಗಲಿಲ್ಲ. ಕರ್ನಾಟಕದ ಪಾಲಿನ 270 ಕೋಟಿ ರೂ. ಗಳ ಶೇರು ಮೊತ್ತವನ್ನು ಯಾವ ರೀತಿ ಹೊಂದಾಣಿಕೆ ಮಾಡಬೇಕು ಎಂಬುದರ ಬಗ್ಗೆ ಈಗಾಗಲೆ ಪತ್ರ ವ್ಯವಹಾರ ನಡೆಸಲಾಗಿದೆ. ಭಾರತೀಯ ರೈಲ್ವೆಯೊಂದಿಗೆ ವೀಲೀನ ಆದಲ್ಲಿ, ಹೊಸ ರೈಲುಗಳು ಕೂಡ ಬರಲಿದ್ದು, ರೈಲು ನಿಲ್ದಾಣಗಳು ಕೂಡ ಸುಧಾರಣೆ ಕಾಣಲಿವೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ವೀಲೀನ ಪ್ರಕ್ರಿಯೆ ಬಗ್ಗೆ ರಾಜ್ಯ ಸರ್ಕಾರ ಕೊಂಕಣ ರೈಲ್ವೆಗೆ ಪತ್ರ ವ್ಯವಹಾರ ಮಾಡಿದ್ದು, ಅವರಿಂದ ಉತ್ತರ ಬರುವ ನೀರೀಕ್ಷೆಯಲ್ಲಿದ್ದೇವೆ ಎಂದರು.