ಆಫ್ಘಾನಿಸ್ತಾನ: ಆತ್ಮಾಹುತಿ ಬಾಂಬ್ ದಾಳಿ, ಆರು ಮಂದಿ ಸಾವು

ಕಾಬೂಲ್, ಫೆ 11, ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ಪಶ್ಚಿಮ ಭಾಗದಲ್ಲಿರುವ ಸೇನಾ ವಿಶ್ವವಿದ್ಯಾಲಯದ ಹೊರಗೆ ಮಂಗಳವಾರ ಆತ್ಮಾಹುತಿ ಬಾಂಬರ್ ಸ್ಫೋಟಗೊಂಡು ಆರು ಜನರು ಸಾವನ್ನಪ್ಪಿದ್ದಾರೆ.ಸ್ಫೋಟದಲ್ಲಿ ಇತರ 12 ಮಂದಿ ಗಾಯಗೊಂಡಿದ್ದಾರೆ ಎಂದು ಆಫ್ಘನ್ ಆಂತರಿಕ ಸಚಿವಾಲಯ ದೃಢಪಡಿಸಿದ್ದು, ಮೃತಪಟ್ಟವರಲ್ಲಿ ಆತ್ಮಾಹುತಿ ಬಾಂಬರ್ ಸೇರಿದ್ದಾನೆ.

‘5ನೇ ಪೊಲೀಸ್ ಜಿಲ್ಲೆಯ ಚಾರ್ ರಾಹಿ ಕಂಬಾರ್ ಪ್ರದೇಶದಲ್ಲಿ ಬೆಳಿಗ್ಗೆ 7 ಗಂಟೆಗೆ (ಸ್ಥಳೀಯ ಕಾಲಮಾನ) ಓರ್ವ ಆತ್ಮಹುತಿ ಬಾಂಬರ್ ತನ್ನ ಬಳಿ ಇದ್ದ ಸ್ಫೋಟಕಗಳನ್ನು ಸ್ಫೋಟಿಸಿದ್ದಾನೆ. ಸ್ಫೋಟದಲ್ಲಿ ಮೂವರು ಸೇನಾ ಸಿಬ್ಬಂದಿ ಮತ್ತು ಇತರ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಸ್ಫೋಟದಲ್ಲಿ ಐದು ನಾಗರಿಕರು ಸೇರಿದಂತೆ 12 ಮಂದಿ ಗಾಯಗೊಂಡಿದ್ದಾರೆ. ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.’ ಎಂದು ಸಚಿವಾಲಯದ ವಕ್ತಾರ ನಸ್ರತ್ ರಹೀಮಿ ಟ್ವಿಟರ್ ನಲ್ಲಿ ಬರೆದಿದ್ದಾರೆ.ಸ್ಫೋಟದಿಂದಾಗಿ ವಾಹನ ದಟ್ಟಣೆಯ ರಸ್ತೆಯಲ್ಲಿ ಸಾಗುತ್ತಿದ್ದ ಹಲವಾರು ವಾಹನಗಳು ಹಾನಿಗೊಂಡಿವೆ ಎಂದು ಅವರು ಹೇಳಿದ್ದಾರೆ. ಸ್ಫೋಟದ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತಿಲ್ಲ.

ಕಳೆದ ವರ್ಷ ಮೇ ಅಂತ್ಯದಲ್ಲಿ ಇದೇ ವಿಶ್ವವಿದ್ಯಾಲಯದ ಮೇಲೆ ಆತ್ಮಾಹುತಿ ಬಾಂಬರ್ ದಾಳಿ ನಡೆಸಿದ್ದ. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಹೊತ್ತಿದ್ದರು. ಇದು ಇತ್ತೀಚಿನ ತಿಂಗಳುಗಳಲ್ಲಿ ರಾಜಧಾನಿ ಕಾಬೂಲ್ ನಲ್ಲಿ ನಡೆದ  ಭೀಕರ ದಾಳಿಯಾಗಿದೆ. ಸಾಧ್ಯವಾಗಬಹುದಾದ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲು ಅಮೆರಿಕ ಮತ್ತು ತಾಲಿಬಾನ್ ಪ್ರಯತ್ನಿಸುತ್ತಿರುವ ಸಮಯದಲ್ಲೇ ಈ ದಾಳಿ ನಡೆದಿದೆ.