ಎಸ್ -400 ಕ್ಷಿಪಣಿಗಳ ಪೂರೈಕೆಗಾಗಿ ರಷ್ಯಾಕ್ಕೆ ಭಾರತದಿಂದ ಮುಂಗಡ ಪಾವತಿ

  ಮಾಸ್ಕೋ, ಆ29      ಎಸ್ -400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳಿಗಾಗಿ ಭಾರತದಿಂದ ಮುಂಗಡ ಪಾವತಿಯನ್ನು ರಷ್ಯಾ ಸ್ವೀಕರಿಸಿದೆ ಎಂದು ರಷ್ಯಾದ ಸೇನಾ-ತಾಂತ್ರಿಕ ಸಹಕಾರ ಕುರಿತ  ಫೆಡರಲ್ ಸರ್ವಿಸ್ ಗುರುವಾರ ತಿಳಿಸಿದೆ. 

  'ಎಸ್ -400 ಕ್ಷಿಪಣಿಗಳಿಗೆ ಭಾರತ ಮುಂಗಡ ಪಾವತಿಸುವುದರೊಂದಿಗೆ ಈ ವಿಷಯ ಇತ್ಯರ್ಥವಾಗಿದೆ.' ಎಂದು ರಕ್ಷಣಾ ಸಹಕಾರ ಸಂಸ್ಥೆ ಸ್ಪುಟ್ನಿಕ್ ತಿಳಿಸಿದೆ. 

 'ಕೆಲ ಕಾರಣಗಳಿಂದಾಗಿ, ನಾವು ತಾಂತ್ರಿಕ ವಿವರಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಪ್ರಸ್ತುತ ಮಾಸ್ಕೋ ಪ್ರದೇಶದ ಜುಕೋವ್ ಸ್ಕಿಯಲ್ಲಿ  ನಡೆಯುತ್ತಿರುವ ಎಂಎಕೆಎಸ್-2019 ವೈಮಾನಿಕ ಪ್ರದರ್ಶನದ ವೇಳೆ ರಷ್ಯನ್ ಫೆಡರಲ್ ತಿಳಿಸಿದೆ.  

  2019 ರ ಅಂತ್ಯದ ವೇಳೆಗೆ ಭಾರತದಿಂದ ಮುಂಗಡ ಪಾವತಿ ಪಡೆಯಲು ರಷ್ಯಾ ಆಶಿಸುತ್ತಿದೆ.  ಇದರಿಂದಾಗಿ ಪೂರೈಕೆ 2020 ರಲ್ಲಿ ಆರಂಭವಾಗಿ, 2025 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಜುಲೈ 9 ರಂದು ಸಂಸ್ಥೆಯ ಉಪನಿರ್ದೇಶಕ ವ್ಲಾಡಿಮಿರ್ ಡ್ರೋಜೋವ್ ಹೇಳಿದ್ದರು.  

  ಕಳೆದ ವರ್ಷ ಅಕ್ಟೋಬರ್ನಲ್ಲಿ ಭಾರತ ಮತ್ತು ರಷ್ಯಾ 5 ಶತಕೋಟಿ ಡಾಲರ್ ಮೊತ್ತದ ಎಸ್ -400 ಕ್ಷಿಪಣಿ ವ್ಯವಸ್ಥೆಗಳ ಪೂರೈಕೆ ಒಪ್ಪಂದವನ್ನು ಮಾಡಿಕೊಂಡಿದ್ದವು. 

 ಈ ಒಪ್ಪಂದವನ್ನು ಅಮೆರಿಕ ವಿರೋಧಿಸಿದೆ. ಕಳೆದ ವರ್ಷ, ಎಸ್ -400 ಕ್ಷಿಪಣಿಗಳನ್ನು ಖರೀದಿಸುವ ಬಗ್ಗೆ ಭಾರತ, ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳುವುದನ್ನು ತಡೆಯುವ ಪ್ರಯತ್ನವನ್ನು ಅಮೆರಿಕ ಮಾಡಿತ್ತು.  

  ಜುಕೋವ್ ಸ್ಕಿಯಲ್ಲಿ ಅಂತಾರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಪ್ರದರ್ಶನ ಆಗಸ್ಟ್ 27ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 1ರವರೆಗೆ ನಡೆಯಲಿದೆ.