ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಪ್ರವೇಶ

ನವದೆಹಲಿ, ಅ 19:     ದೇಶಾದ್ಯಂತ ಇರುವ  33 ಸೈನಿಕ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ  ಬಾಲಕಿಯರಿಗೂ ಪ್ರವೇಶ ನೀಡುವ ಮಹತ್ವದ ತೀರ್ಮಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೆಗೆದುಕೊಂಡಿದ್ದಾರೆ. ಆದರೆ ಇದು ಹಂತಹಂತವಾಗಿ ಜಾರಿಗೆ ಬರಲಿದೆ ಎಂದು ಅಧಿಕೃತ ಪ್ರಕಟನೆ ಹೇಳಿದೆ. ಎರಡು ವರ್ಷಗಳ ಹಿಂದೆ ಮಿಝೋರಾಂನ ಚಿಂಗ್ಚಿಪ್ ಸೈನಿಕ ಶಾಲೆಯಲ್ಲಿ ಬಾಲಕಿಯರಿಗೆ ಪ್ರವೇಶ ನೀಡುವ ಪೈಲಟ್ ಯೋಜನೆ ಫಲಕೊಂಡ ಹಿನ್ನಲೆಯಲ್ಲಿ  ಸಚಿವರು, ಎಲ್ಲ ಶಾಲೆಗಳಿಗೆ ಇದನ್ನು ವಿಸ್ತರಿಸಲು ಅನುಮತಿ ನೀಡಿದ್ದಾರೆ. ಇದಕ್ಕೆ ಅಗತ್ಯವಾದ ಮೂಲ ಸೌಕರ್ಯವನ್ನು ಒದಗಿಸುವಂತೆ ಹಾಗೂ ಸಾಕಷ್ಟು ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸೂಚನೆಯನ್ನೂ  ನೀಡಿದ್ದಾರೆ. ಹೆಚ್ಚಿನ ಪಾಲ್ಗೊಳ್ಳುವಿಕೆ, ಲಿಂಗ ಸಮಾನತೆ, ಸಶಸ್ತ್ರ ಪಡೆಗಳಲ್ಲಿ ಹೆಚ್ಚಿನ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ಬೇಟಿ ಬಚಾವೊ ಬೇಟಿ ಪಡಾವೊ ಉದ್ದೇಶವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟನೆ ವಿವರಿಸಿದೆ.